Sunday, 9 October 2016

ಬಾಲ್ಕನಿ ಬರ್ಡಿಂಗ್--ಕೆಮ್ಮೀಸೆ ಪಿಕಳಾರ


ಬಾಲ್ಕನಿ ಬರ್ಡಿಂಗ್ ನ 4 ನೇ ಹಕ್ಕಿ – ಪಿಕಳಾರ. ಪರಿಸರ ವೀಕ್ಷಣೆ ನನಗೆ ಮೊದಲಿನಿಂದಲೂ ಆಸಕ್ತಿಯ ವಿಷಯವೇ. ಹೈಸ್ಕೂಲಿನ ವಿಜ್ಞಾನ ದಲ್ಲಿ ಓಡುತಿದ್ದ ಪಾಠಗಳ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುತಿತ್ತು. ಜೀವಶಾಸ್ತ್ರವನ್ನು ಪಿ‌ಯೂ‌ಸಿಯಲ್ಲಿ ಅರಿಸಿಕೊಂಡಾಗಲೂ ನಮ್ಮ ಪರಿಸರವೇ ಜೀವಶಾಸ್ತ್ರದ ಪ್ರಯೋಗಶಾಲೆಯಾಗಿತ್ತು. ಅತಿಯಾದ crazy ಯಾಗಿ ಅಲ್ಲದಿದ್ದರೂ ಅವಕಾಶ ಸಿಕ್ಕಿದಾಗ ಕಣ್ಣು ಜಾಸ್ತಿ ವಿಷಯಗಳನ್ನು ವೀಕ್ಷಿಸಲು ಹಣಕಿಸುತ್ತದೆ. ಪಕ್ಷಿವೀಕ್ಷಣೆಗೂ  ಅತಿಯಾಗಿ ಹಚ್ಚಿಕೊಂಡಿರಲಿಲ್ಲ. ಪಕ್ಷಿಗಳ ಬಗ್ಗೆ ಆಸಕ್ತಿ ಬರಲು ಕಾರಣವಾಗಿದ್ದು ಇದೇ ಪಿಕಳಾರ. ನಮ್ಮ ಮಾವನ ಮನೆಯ ಕೈತೋಟದಲ್ಲಿ ಕೆಮ್ಮೀಸೆ ಪಿಕಳಾರ ಗೂಡುಕಟ್ಟಿ ಮೂರು ಮರಿಗಳನ್ನು ಬೆಳೆಸಿತ್ತು. ತುಂಬಾ ಕೆಳಸ್ತರದಲ್ಲಿ ಚಿಕ್ಕ ಹೂವಿನ ಗಿಡದಲ್ಲಿ ಗೂಡುಕಟ್ಟಿದ್ದನ್ನು ಅದಕ್ಕಿಂತ ಮೊದಲು ನೋಡಿರಲಿಲ್ಲ. ಆ ಗೂಡನ್ನು ನೋಡಿದ ಮೇಲೆ ನನ್ನ ಕಣ್ಣು, ಪಕ್ಷಿಗಳ ಮುಖ್ಯವಾಗಿ ಈ ಪಿಕಳಾರ ಹಕ್ಕಿಯ ಗೂಡುಕಟ್ಟುವ ದೃಶ್ಯಗಳನ್ನು ಇನ್ನೂ ಹೆಚ್ಚಾಗಿ ಹುಡುಕಲು ಶುರುಮಾಡಿದವು. ಮನೆಯ ಕೈ ತೋಟಗಳಲ್ಲಿ, ಸಣ್ಣ ಸಣ್ಣ ಪೊದೆಗಳಲ್ಲಿ ಈ ಪಿಕಲಾರದ ಗೂಡುಗಳು ಹಲವಾರು ಸಿಕ್ಕಿದರೂ ಸೂಕ್ಷ್ಮ ವೀಕ್ಷಣೆ ಮಾಡಲಾಗುತ್ತಿರಲಿಲ್ಲ.
ನಾವಿರುವ ಅಪಾರ್ಟ್ಮೆಂಟಿನ 8ನೇ ಅಂತಸ್ತಿನಲ್ಲಿರುವ ನಮ್ಮ ಮನೆ ಬಾಲ್ಕನಿಗೆ  ಕೆಮ್ಮೀಸೆ ಪಿಕಳಾರ ಜೋಡಿಗಳು  ಆಗಾಗ್ಗೆ ಬಂದು ಆಹಾರಕ್ಕಾಗಿ ಹುಡುಕಾಡುತಿತ್ತು. ಮದ್ಯಾಹ್ನನ ಸಮಯದಲ್ಲಿ ಬಾಲ್ಕನಿಯಲ್ಲಿ  ಬೆಳೆಸಿದ ಅಂತರಗಂಗೆ ಯ ಕುಂಡದಲ್ಲಿನ ನೀರನ್ನು ಕುಡಿದು ಹೋಗುತಿದ್ದವು. ಕೆಲವು ದಿನಗಳ ನಂತರ ಒಮ್ಮೆ ಕತ್ತಲಾದ  ನಂತರ ಬಾಲ್ಕನಿಯಲ್ಲಿ ಕಟ್ಟಿರುವ ಹಗ್ಗದಲ್ಲಿ ಬಟ್ಟೆ ಒಣಗಿಸಲು ಹೋದಾಗ ಆಶ್ಚರ್ಯ ಕಾದಿತ್ತು. ಒಂದು ಕೆಮ್ಮೀಸೆ ಪಿಕಳಾರ ಆ ಹಗ್ಗ ಕಟ್ಟಿದ ಮರದ ಫ್ರೇಮೀನ ಮೇಲೆ ಮುದುಡಿಕೊಂಡು ಕುಳಿತಿತ್ತು. ತನ್ನ ಕೊಕ್ಕು ಮತ್ತು ಕೊರಳನ್ನು ದೇಹದ ಪುಕ್ಕಗಳ ನಡುವೆ ಹುದುಕಿಸಿಕೊಂಡು ಕುಳಿತಿರುವ ಪಿಕಳಾರ ಹಕ್ಕಿಯು ಫೋಟೋ ಕ್ಲಿಕ್ಕಿಸಿದಾಗಲೂ ಹಾರಲಿಲ್ಲ.!!! ನಾವು ಬಟ್ಟೆ ಹರಡುವಷ್ಟು ಹೊತ್ತು ಅದು ಹೆದರಿಕೊಳ್ಳದೆ ಅಲ್ಲಿಯೇ ಕುಳಿತಿತ್ತು. ಇಲ್ಲಿ ಯಾಕೆ ಇದು ಕುಳಿತುಕೊಳ್ಳುತ್ತಿದೆ ಎಂಬುದು ನಮ್ಮ ಪ್ರಶ್ನೆಯಾಗಿತ್ತು

First sight---ತಲೆ ಮತ್ತು ಕೊಕ್ಕನ್ನು ಗರಿಗಳೊಳಗೆ ಅಡಗಿಸಿಕೊಂಡಿದ್ದಾಗ 
ಹೀಗೆ ಒಂದೆರಡು ದಿನ ಕಳೆದಮೇಲೆ ತಿಳಿದ ವಿಷಯ ತುಂಬಾ ಆಶ್ಚರ್ಯಕರವಾಗಿತ್ತು. ಆ ಪಿಕಳಾರ ನೆರೆಮನೆಯ ಬಾಲ್ಕನಿಯ ಇದೇರೀತಿಯ ಬಟ್ಟೆ ಒಣಗಿಸುವ ಹಗ್ಗದ ಮರದ ಫ್ರೇಮೀನ ಮೇಲೆ ಗೂಡು ಕಟ್ಟಿತ್ತು!!! ತಕ್ಷಣ ನಾವು ಅಲ್ಲಿಗೆ ಹೋಗಿ ನೋಡಿದರೆ ಆವಾಗಲೇ ಅದು ಮೊಟ್ಟೆ ಇಟ್ಟಾಗಿತ್ತು.!! ಸಣ್ಣ ಸಣ್ಣ ಪೊದೆಗಳಲ್ಲಿ ಕೆಸ್ತರದಲ್ಲಿ ಮಾತ್ರ ಗೂಡನ್ನು ನೋಡಿದ ನನಗೆ ಅದು ನೆರೆಮನೆಯ ಬಾಲ್ಕನಿಯಲ್ಲಿ, ಅದೂ ಎಂಟನೇ ಅಂತಸ್ತಿನಲ್ಲಿ, ಗೂಡನ್ನು ನೋಡಿ ಆಶ್ಚರ್ಯವಾಯಿತು. ಅವರ ಮನೆಯಲ್ಲಿ ಬ್ಬರು ಚಿಕ್ಕ ಮಕ್ಕಳಿರುವುದರಿಂದ ಯಾವಾಗಲೂ ಮಕ್ಕಳು ಹೊರಬಂದು ಗೂಡನ್ನು ನೋಡುವುದು ಮಾಮೊಲಾಯಿತು. ಮಕ್ಕಳ ಆಗಮನದಿಂದ ಒಂದಿಷ್ಟೂ ಗಾಬರಿಯಾಗದ ಪಿಕಳಾರ ಗೂಡುಬಿಟ್ಟು ಹಾರುತಿರಲಿಲ್ಲ. .. ಒಂದು ಹಕ್ಕಿ ಗೂಡಲ್ಲಿ ಕೂತಿದ್ದರೆ ಇನ್ನೊಂದು ಮೇಲಿನ ಅಥವಾ ಕೆಳೆಗಿನ ಮನೆಯ ಕಿಟಕಿಯ ಮೇಲೆ ಕುಳಿತು ಕಾವಲು ಕಾಯುತಿತ್ತು. ಕಾಗೆ ಮತಿತ್ತರ ಅಪಾಯ ಕಂಡಾಗ ಗಟ್ಟಿಯಾಗಿ ಕೂಗಿ ಗೂಡಲ್ಲಿರುವ ಹಕ್ಕಿಯನ್ನು ಎಚ್ಚರಿಸುತಿತ್ತು. ಅಗಾಗ್ಯೆ ನಮ್ಮ ಬಾಲ್ಕನಿಗೆ ಬಂದು ಏನಾದರೂ ತಿನ್ನಲು ಸಿಗುತ್ತಾ ಎಂದು ನೋಡಿ ಹೋಗುತಿತ್ತು. ರಾತ್ರಿಹೊತ್ತು ಒಂದು ಹಕ್ಕಿ ಗೂಡಲ್ಲಿ ಕೂತಿದ್ದರೆ ಇನ್ನೊಂದು ನಮ್ಮ ಬಾಲ್ಕನಿಯ ಮರದ ಫ್ರೇಮೀನ ಮೇಲೆ ಕುಳಿತಿರುತಿತ್ತು.
ಮೊಟ್ಟೆಗೆ ಕಾವು ಕೊಡುತ್ತಿರುವ ಬುಲ್ ಬುಲ್.... 

ನಮ್ಮ ಮನೆಯ ಬಾಲ್ಕನಿಯಲ್ಲಿ ಮತ್ತೊಂದು ಹಕ್ಕಿಯ ಕಾವಲು... 

5-6 ದಿನಗಳ ನಂತರ ಮೊಟ್ಟೆಯೊಡೆದು ಮರಿಯಾದವು. ಮರಿಗಳಿಗೆ ಗುಟುಕು ಕೊಟ್ಟು ಬೆಳೆಸುತ್ತಿದ್ದ ಕ್ರಮ ಮಾತ್ರ ಅತ್ಯಂತ ಕುತೂಹಲಕರವೂ ವೀಕ್ಷಣೀಯವೂ ಆಗಿತ್ತು. ಮೊಟ್ಟೆಯಿಂದ ಹೊರಬಂದ ಆ ಹಕ್ಕಿಗಳು ಮಾಂಸದ ಮುದ್ದೆಯಂತೆ ಇದ್ದರೂ ಬಾಯಿಮಾತ್ರ ಅಗಲವಾಗಿ ತೆರೆದಿರುತಿದ್ದವು. ಬಸವನ ಹುಳ ಇತ್ಯಾದಿ ಹುಳಗಳೂ, ವಿಧ-ವಿಧವಾದ ಹಣ್ಣುಗಳನ್ನು ತಂದು ತೆರೆದಿದ್ದ ಆ ಬಾಯಿಯೊಳಗೆ ತುರಿಕಿಸುತಿದ್ದವು. ಪಿಕಳಾರ ಹಕ್ಕಿಗಳು ಮರಿಗಳಿಗೆ ಪದೇ-ಪದೇ ತಿನಿಸುತ್ತಿದ್ದವು. 5-10 ನಿಮಿಷಕ್ಕೊಮ್ಮೆ ಏನಾದರೂ ಆಹಾರ ತರುತಿದ್ದವು. ಕೀಟ ಮತ್ತು ಹಣ್ಣುಗಳನ್ನು ಬೇಕಾದಷ್ಟೇ ಪ್ರಮಾಣದಲ್ಲಿ ತಂದು ಸಮತೋಲನ ಆಹಾರವನ್ನು ಕಾಯ್ದುಕೊಳ್ಳುತ್ತಿತ್ತು... ಜೋಡಿ ಹಕ್ಕಿಗಳ ಅತೀ ವಿಶೇಷವಾದ ಒಂದು ಚಟುವಟಿಕೆ ನಮ್ಮನ್ನು ತುಂಬಾ ಆಶ್ಚರ್ಯಚಕಿತರಾಗಿಸಿತ್ತು. ತಂದ ಆಹಾರದಲ್ಲಿ ಒಂದಿಸ್ಟನ್ನು ಬಾಯಿಗೆ ತುರಿಕಿಸದೆ, ಗೂಡಿನ ಅಂಚಲ್ಲಿ ಕೂಡಿಡುತಿತ್ತು. ಮರಿಹಕ್ಕಿಗಳನ್ನು ಆಹಾರ ಕುಟುಕಿ ತಿನ್ನಲು ಕಲಿಸಿವ ಉದ್ದೇಶವೂ ಅಥವಾ ಆಹಾರ ಸಿಗದಾಗ ಬೇಕಾಗುವ ರಿಸರ್ವ್ ಸ್ಟಾಕ್ ಆಗಿತ್ತೋ ಏನೋ....!!!! ಪಕ್ಕದ ಮನೆಯ ಬಾಲ್ಕನಿಯಲ್ಲಿ ಗೂಡಿದ್ದರೆ ನಮ್ಮ ಬಾಲ್ಕನಿಯಲ್ಲಿ ಬಂದು ಹಣ್ಣಿಗಾಗಿ ನಮ್ಮನ್ನು ಬೇಡುತ್ತಿದ್ದ ರೀತಿ ವಿಚಿತ್ರವಾಗಿತ್ತು. ಬೆಳ್ಳಿಗ್ಗೆ 7 ಗಂಟೆಯಿಂದಲೇ ಅವುಗಳ ಕೂಗಾಟ ಶುರುವಾಗುತಿತ್ತು. ಬಾಲ್ಕನಿಯಲ್ಲಿ ಕೂತ ಹಕ್ಕಿಯನ್ನು ನಾವು ನೋಡಲು ಹೋದರೆ ಪುರ್ ಎಂದು ಹಾರಿಹೋದರೂ ಹತ್ತಿರದಲ್ಲೇ ಇದ್ದು ನಮ್ಮ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುತಿದ್ದವು. ಹಾರಿಹೋದ ಹಕ್ಕಿಗಳು ಬಾಲ್ಕನಿಯ ಬಾಗಿಲು ತೆರೆದು-ಮುಚ್ಚಿದ ಶಬ್ದ ಕೇಳುತ್ತಲೇ ವಾಪಸು ಬರುತಿದ್ದವು... ಅವುಗಳ ನಿರೀಕ್ಷೆಯಂತೆ ನಾವಿಟ್ಟ ಬಾಳೆಹಣ್ಣು, ಚಿಕ್ಕೂ ಸೇಬು ಹಣ್ಣು ಗಳನ್ನು ಖುಷಿಯಿಂದ ಕೊಕ್ಕಿನಲ್ಲಿ ಹಿಡಿಯುವಸ್ಟು ತುಂಬಿಕೊಂಡು ಹೋಗಿ ಮರಿಗಳಿಗೆ ಉಣಿಸಿತಿದ್ದವು.
ಹಣ್ಣನ್ನು ಹುಡುಕುತ್ತಾ ನಮ್ಮ ಮನೆಯ ಬಾಲ್ಕನಿಗೆ ಬಂದಾಗ ಕ್ಲಿಕ್ಕಿಸಿದ ಫೋಟೋ... 

6-7 ದಿನಗಳಾದ ನಂತರ ಒಂದುದಿನ  ಡ್ಯೂಟಿಗೆ ಬಂದಿದ್ದಾಗ ಪಿಕಳಾರ ಗೂಡುಕಟ್ಟಿದ ಮನೆಯ ನಮ್ಮ ಸಹದ್ಯೋಗಿಯಿಂದ ಕರೆ ಬಂದಿತ್ತು. ವಿಷಯ ಗಂಭೀರವಾಗಿತ್ತು. ನಾಲ್ಕು ಮರಿಗಳಲ್ಲಿ ಎರಡು ಮರಿಗಳು ಗೂಡಿನಿಂದ ಹೊರಗೆ ಬಂದು ಕೆಳಗೆ ಬಿದ್ದಿದ್ದವು... ಚಿಕ್ಕದಾಗಿ ಪುಕ್ಕ ಬಂದಿದ್ದರೂ ಹಾರಲು ಅಶಕ್ಯವಾಗಿದ್ದ ಆ ಮರಿಗಳು ಬಾಲ್ಕನಿಯ ನೆಲದಲ್ಲಿ ಕೂತಿದ್ದವು. .. ಪೋಷಕ ಹಕ್ಕಿಗಳು ಗೂಡಲ್ಲಿ ಕೂತ ಇನ್ನೆರಡು ಮರಿಗಳಿಗೇ ಆಹಾರ ಕೊಡುತಿದ್ದವೇ ವಿನಹ ನೆಲದ ಮೇಲಿನ ಮರಿಗಳನ್ನು ನೋಡುತ್ತಲೇ ಇರಲಿಲ್ಲ.... ಮರಿಗಳನ್ನು ಹೇಗೆ ರಕ್ಷಿಸುವುದು ಎಂಬುದು ನಮ್ಮ ಸಹದ್ಯೋಗಿಯ ಪ್ರಶ್ನೆಯಾಗಿತ್ತು .... ಸ್ವಲ್ಪ ನೀರನ್ನೂ... ಹಣ್ಣನ್ನೂ ಸಾದ್ಯವಾದರೆ ತಿನ್ನಿಸಿ... ಇಲ್ಲವಾದರೆ ಕನಿಷ್ಠ ಕಾಗೆಗಳಿಂದ ರಕ್ಷಿಸಿ ಎಂದು ಸಲಹೆ ಕೊಟ್ಟೆ...ಸಂಜೆ ಡ್ಯೂಟಿಯಿಂದ ಬಂದ ನಂತರ ಆ ನಮ್ಮ ಸಹದ್ಯೋಗಿ ಮರಿಹಕ್ಕಿಗಳ ರಕ್ಷಣೆಗೆ ತೆಗೆದುಕೊಂಡ ಕಾಳಜಿ ಅದ್ಭುತವಾಗಿತ್ತು. ಮರಿಗಳಿಗೆ ನೀರು ಮತ್ತು ಬೇಯಿಸಿದ ಮೊಟ್ಟೆಯನ್ನು ಕೊಟ್ಟು ಸ್ವಲ್ಪ ಸುಧಾರಿಸಿದ ಮರಿಗಳನ್ನು ರಟ್ಟಿನ ಪೆಟ್ಟಿಗೆಯ ತೆರೆದ ಮುಚ್ಚಳದಲ್ಲಿಟ್ಟು ಪಿಕಳಾರದ ಗೂಡಿನ ಹತ್ತಿರ ತೂಗುಹಾಕಿದ್ದರು. ...ಪಿಕಳಾರ ಹಕ್ಕಿಗಳು ಈ ಮರಿಗಳನ್ನು ಆರೈಕೆಮಾಡಲು ಶುರುಮಾಡಿದ್ದವು... ಭೇಷ್... ಈ ಹಕ್ಕಿಪ್ರಿಯರ ಕಾಳಜಿಗೊಂದು ಸಲಾಮ್....  ನಂತರದ ಒಂದೆರಡು ದಿನಗಳಲ್ಲಿ ನಾಲ್ಕೂ ಮರಿಗಳು ಸುರಕ್ಷಿತವಾಗಿ ಹಾರಿಹೋಗಿ ಕಥೆ ಸುಖಾಂತ್ಯ ಕಂಡಿತು. ಪಿಕಳಾರ ಮರಿಗಳ ಅತೀ ಬೇಗ ಬೆಳವಣಿಗೆಯಾಗಿ ಹಾರಿಹೋಗುವುದು ವಿಚಿತ್ರವೇ..... ದಿನದಿಂದ ದಿನಕ್ಕೆ ಅವುಗಳ ದೇಹದಲ್ಲಾಗುವ ಬೆಳವಣಿಗೆ ಆಶ್ಚರ್ಯತರುತ್ತದೆ. ... ಬೆಳ್ಳಿಗ್ಗೆ ಇದ್ದಂತೆ ಸಂಜೆ ಇರುವುದಿಲ್ಲ... 8-9 ದಿನಗಳಲ್ಲಿ ರೆಕ್ಕೆ-ಪುಕ್ಕ ಬೆಳೆದ ಮರಿಗಳು ಹಾರಲು ಶಕ್ಯ....
ಈವಾಗಲೂ ಪಿಕಳಾರ ಹಕ್ಕಿಗಳು ನಮ್ಮ ಬಾಲ್ಕನಿಯ ನಿತ್ಯದ ಅತಿಥಿ... ಹಣ್ಣಿಟ್ಟಿದ್ದರೆ ಖುಷಿಯಿಂದ ತಿನ್ನುತ್ತವೆ,...ಇಲ್ಲವಾದಲ್ಲಿ ಒಂದೆರಡು ಬಾರಿ ಕೂಗಿ ಕರೆದು ಹಣ್ಣು ಹಾಕಿಸುಕೊಳ್ಳುತ್ತವೆ. ಹಾಕಿಲ್ಲವಾದರೆ ಬೈದುಕೊಂಡೇ ಬೇರೆ ಬಾಲ್ಕನಿಗೆ ಪಲಾಯನ ಮಾಡುತ್ತವೆ... ಕಳೆದವಾರ ಎರಡು ಮರಿಗಳನ್ನು ಕರೆದು ತಂದಿತ್ತು... 2 ದಿನ ಪೋಷಕ ಹಕ್ಕಿಗಳ ಸಂಗಡ ಬಂದ ಮರಿಗಳು ನಂತರ ತಾವಾಗಿಯೇ ಬರಲು ಶುರುಮಾಡಿದವು... ಒಟ್ಟಾರೆ ಬೆಳ್ಳಿಗ್ಗೆ-ಬೆಳ್ಳಿಗ್ಗೆ ನಮಗೆ ಸುಮಧುರವಾದ ಆಲಾರಂ!!!!.  
ಕೆಮ್ಮೀಸೆ ಪಿಕಳಾರ ಅಥವಾ ಕೆಂಪು ಕಪೋಲದ ಪಿಕಳಾರ ಏಷಿಯಾ ಖಂಡದಲ್ಲಿ ಕಂಡುಬರುವ ಅತಿ ಸಾಮನ್ಯವಾದ ಪಿಕಳಾರ (Bulbul) ಜಾತಿಯ ಹಕ್ಕಿ. ಇತರ ಪಿಕಳಾರಗಳಂತೆ ಈ ಹಕ್ಕಿಯೂ ಕೂಡ ಹಣ್ಣು, ಮಕರಂದ ಹಾಗು ಕ್ರಿಮಿ ಕೀಟಗಳನ್ನು ಆಹಾರವಾಗಿ ಸೇವಿಸುತ್ತವೆ. ಈ ಹಕ್ಕಿಯನ್ನು ನಗರಗಳ ಉದ್ಯಾನವನಗಳಲ್ಲಿಯೂ, ಮಲೆನಾಡಿನ ದಟ್ಟ ಅರಣ್ಯಗಳಲ್ಲಿಯೂ ಕಾಣಬಹುದು.ಕೆಮ್ಮೀಸೆ ಪಿಕಳಾರ ಗುಬ್ಬಚ್ಚಿಗಿಂತ ಕೊಂಚ ದೊಡ್ಡದು ಹಾಗು ಮೈನಾಗಿಂತಲೂ ಕೊಂಚ ಸಣ್ಣ ಗಾತ್ರದ ಹಕ್ಕಿ. ಇದರ ಗಾತ್ರ ಸುಮಾರು ೨೦ ಸೆ.ಮೀ. ಕಪ್ಪು ಬಣ್ಣದ ಜುಟ್ಟು, ಬಿಳಿಯ ಎದೆ ಭಾಗ, ಕೆಂಪು ಬಣ್ಣದ ಗಲ್ಲ (ಕೆನ್ನೆ), ಕಂದು ಬಣ್ಣದ ಬೆನ್ನು ಹಾಗು ಬಾಲ ಈ ಹಕ್ಕಿಯ ಪ್ರಮುಖ ಗುರುತಿನ ಚಿಹ್ನೆಗಳು.
ನಾಗರಾಜ ಅಡಿಗ, ಕೈಗಾ. 


Sunday, 21 August 2016

ಕನಸು ನನಸಾದಾಗ...?!

ಸುಮಾರು ೩೫ ವರ್ಷಗಳ  ಹಿಂದಿನ ಮಾತು. ರೋಹಿತ್ ನ ಬಾಲ್ಯದ ದಿನಗಳವು. ಆ ದಿನಗಳಲ್ಲಿಯೇ ರೋಹಿತ್ ಗೆ ಬಾಹ್ಯಾಕಾಶ , ಆಕಾಶಕಾಯಗಳು, ಉಪಗ್ರಹಗಳು ಇವುಗಳ ಬಗ್ಗೆ ಅತ್ಯಂತ ಆಸಕ್ತಿ.  ಕರೆಂಟಿಲ್ಲದ ಆ ಕತ್ತಲ ರಾತ್ರಿಯಲ್ಲಿ ಆಕಾಶವನ್ನು ವೀಕ್ಷಿಸುವುದು ಒಂದು ಹವ್ಯಾಸವಾಗಿತ್ತು. ಸಪ್ತಋಷಿ ಮಂಡಲ, ದ್ರುವ ನಕ್ಷತ್ರ,  ನಕ್ಷತ್ರ ಪುಂಜಗಳು, ಶುಕ್ರ, ಮಂಗಳ, ಗುರು ಗ್ರಹಗಳನ್ನು ಬಾಲ್ಯದಲ್ಲಿಯೇ ಗುರುತಿಸಿಕೊಂಡು ಅವುಗಳ ಚಲನವಲನಗಳನ್ನು ವೀಕ್ಷಿಸುತ್ತಿದ್ದ.  ಪುತ್ತೂರಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಒಬ್ಬ ಖಗೋಳ ವೀಕ್ಷಕನಿಂದ ರಾತ್ರಿ "ಆಕಾಶ ವೀಕ್ಷಣೆ" ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೇಲಂತೂ ಆಸಕ್ತಿ ಇನ್ನೂ  ಹೆಚ್ಚಾಯಿತು. ಹೈಸ್ಕೂಲಿನಲ್ಲಿರುವಾಗ ಕಾಣಿಸಿದ ಧೂಮಕೇತು ಅವನ ಕುತೂಹಲವನ್ನು ಇನ್ನೂ  ಕೆರಳಿಸಿತ್ತು. ರೋಹಿತ್ ನು ಬಾಲ್ಯವನ್ನು ಕಳೆದ ಊರು ಕುಗ್ರಾಮ ಅಲ್ಲದಿದ್ದರೂ ಪ್ರಾಥಮಿಕ ಅಗತ್ಯತೆಗಳನ್ನೂ ಹೊಂದಿರದ ಚಿಕ್ಕ ಗ್ರಾಮ. ಒಂದೆರಡು ವರ್ಷಗಳ ಹಿಂದಷ್ಟೇ ಅಲ್ಲಿ ಸರಕಾರಿ ಹೈಸ್ಕೂಲ್ ಹುಟ್ಟಿಕೊಂಡಿದೆ. ಸಾಮಾನ್ಯ ಸರಕಾರಿ ಶಾಲೆಗಳಲ್ಲಾಗುವಂತೆ ಶಾಲೆಯ ಬಹುತ್ತಮ ಅಧ್ಯಾಪಕರು ನಿರಾಸಕ್ತಿಯಿಂದ ಪಾಠ ಹೇಳಿಕೊಡುತ್ತಿದ್ದರೆ, ವಿಜ್ಞಾನ ಅಧ್ಯಾಪಕರು ಅದಕ್ಕೆ ತದ್ವಿರುಧ್ಧ. ಹೈಸ್ಕೂಲಿನ ನೆಚ್ಚಿನ ವಿಜ್ಞಾನ ಅಧ್ಯಾಪಕರು ರೋಹಿತ್ ನ ಆಸಕ್ತಿಗಳಿಗೆ ಹೆಚ್ಚಿನ ಬೆಂಬಲ ಕೊಟ್ಟು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. "Children's knowledge bank" ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ತಂದುಕೊಟ್ಟು ರೋಹಿತ್ ಗೆ ಅರ್ಥವಾಗದ ವಿಷಯಗಳನ್ನು ವಿವರವಾಗಿ ತಿಳಿಸುತ್ತಿದ್ದರು. ಆಸಕ್ತಿ ತೋರುತ್ತಿದ್ದ ವಿದ್ಯಾರ್ಥಿಗಳೆಂದರೆ ಮುತುವರ್ಜಿವಹಿಸಿ ಹೇಳಿಕೊಡುವುದು ಅವರ ಇಷ್ಟದ ವಿಷಯವಾಗಿತ್ತು. ಅಕ್ಕ-ಪಕ್ಕದ ಶಾಲೆಗಳಲ್ಲಾಗುವ ವಿಜ್ಞಾನ ವಸ್ತುಪ್ರದರ್ಶನಗಳಲ್ಲಿ ಅಧ್ಯಾಪಕದ ಸಹಾಯ-ಪ್ರೋತ್ಸಾಹದಿಂದ ಭಾಗವಹಿಸಿ, ಸೌರವ್ಯೂಹ, ಚಂದ್ರಗ್ರಹಣ-ಸೂರ್ಯಗ್ರಹಣಗಳ ಮಾದರಿಗಳನ್ನು ಮಾಡಿ ಪ್ರದರ್ಶಿಸಿ ಹಲವವಾರು ಬಹುಮಾನಗಳನ್ನೂ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದ. ಶಾಲೆಯಲ್ಲಿರುವ ದೂರದರ್ಶಕದಿಂದ ಕ್ಲಾಸಿನ ಎಲ್ಲ ಮಕ್ಕಳಿಗೆ ಚಂದ್ರನನ್ನು ಮಾತ್ರ ತೋರಿಸುತ್ತಿದ್ದ ಅಧ್ಯಾಪಕರು,  ರೋಹಿತ್ ಅನ್ನು ರಾತ್ರಿಯಲ್ಲೂ ಕರೆದು ಗ್ರಹಗಳ ವೀಕ್ಷಣೆ ಮಾಡಿಸುತ್ತಿದ್ದರು.ಹೈಸ್ಕೂಲಿನ್ನಲಿರುವಾಗಲೇ ಗುರು, ಮಂಗಳ ಶುಕ್ರ ಗ್ರಹಗಳ  ಚಲನಯನ್ನು ಅಂದಾಜಿಸುತ್ತಿದ್ದ. ಹಾಗೆಯೇ ಭಾರತೀಯ ಪಂಚಾಂಗ ಮತ್ತು ಖಗೋಳ ವಿಜ್ಞಾನಗಳ ಸಂಬಂಧವನ್ನು ಹಲವರನ್ನು ಕೇಳಿ ತನ್ನ ಸ್ವಯಂ ಜ್ಞಾನಾರ್ಜನೆ ಮಾಡುತ್ತಿದ್ದ. "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬಂತೆ ತನ್ನ ಕನಸನ್ನೂ  ತಂದೆ-ತಾಯಿ, ಅಧ್ಯಾಪಕರ ಅಲ್ಲದೆ ಊರಿನವರ ನಿರೀಕ್ಷೆಯನ್ನೂ  ಆಕಾಶದೆತ್ತರಕ್ಕೆ ಏರಿಸಿಟ್ಟಿದ್ದ.!
 ಇಂದು ರೋಹಿತ್ ನ ಪಾಲಿಗಷ್ಟೇ ಅಲ್ಲ, ಅವನ ತಂದೆ-ತಾಯಿಗೆ ಅಷ್ಟೇಕೆ ಇಡೀ ದೇಶಕ್ಕೇ ಅತ್ಯಂತ ಮಹತ್ವದ ದಿನ... ಭಾರತೀಯ ಬಾಹ್ಯಾಕಾಶ ಸಂಸ್ಥೆ ನಡೆಸಿದ ೧೫ ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಸ್ವದೇಶೀ ನಿರ್ಮಿತ ವ್ಯೋಮ ನೌಕೆಯಲ್ಲಿ ಭಾರತೀಯನೊಬ್ಬ ಭೂಮಿಗೆ ಮೂರು ಸುತ್ತಿ ಗಿರಿಕಿ ಹೊಡೆದು ಯಶಸ್ವಿಯಾಗಿ ಭೂಮಿಗಿಲಿದ್ದ ಸಂಭ್ರಮ. ಇಸ್ರೋ ತನ್ನ ಮಹತ್ವಾಕಾಂಕ್ಷೆಯ ಯೋಜನೆ ಸಾಕಾರಗೊಳಿಸಿದೆ. ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ಭಾರತೀಯರನ್ನೂ, ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾಧನೆಯನ್ನೂ ಕುತೂಹಲದಿಂದ ನೋಡುತ್ತಿದೆ. ಮಾನವ ಸಹಿತ ಅಂತರಿಕ್ಷ ಯಾನ ಮಾಡಿದ ಕೆಲವೇ ಕೆಲವು ದೇಶಗಳ ಪಟ್ಟಿಯಲ್ಲಿ ಭಾರತವೂ ಸಹ ಸೇರಿಕೊಂಡಿತು. ಸ್ವದೇಶೀ ವ್ಯೋಮನೌಕೆಯಲ್ಲಿ ಪ್ರಪ್ರಥಮ ಭಾರಿಗೆ ಬಾಹ್ಯಾಕಾಶದಲ್ಲಿ ಸಂಚರಿಸಿ ಯಶಸ್ವಿಯಾಗಿ ಭೂಮಿಗಿಳಿದ ವ್ಯಕ್ತಿ ಬೇರೆಯರೂ ಅಲ್ಲ...ಅದು ರೋಹಿತ್. ರೋಹಿತ್ ಗೆ ತನ್ನ ಸಂತೋಷವನ್ನು ತಡೆದುಕೊಳ್ಳಲಾಗುತಿಲ್ಲ. ೧೨೫ ಕೋಟಿ ಭಾರತೀಯರಲ್ಲಿ ಯಾರೂ ಮಾಡದ ಸಾಹಸ ಮಾಡಿ ದೇಶಕ್ಕೆ ಹೆಸರು ತಂದ ಹೆಮ್ಮೆ. ತನ್ನ ಎಷ್ಟೋ ವರ್ಷ ಹಿಂದಿನ ಕನಸನ್ನು ಸಾಕಾರಗೊಳಿಸಿದ ಎಲ್ಲಿಲ್ಲದ ಖುಷಿ!!! ಮನಸ್ಸಲ್ಲಿ ಮನೆಮಾಡಿದ ಅದೆಷ್ಟೋ ಗಂಡಾಂತರಗಳಿಂದ ಪಾರಾಗಿ ಸುರಕ್ಷಿತವಾದ ಸಮಾಧಾನ..! ಇಸ್ರೋದ  ಮೊಟ್ಟಮೊದಲಿನ ಸ್ವದೇಶಿ ನಿರ್ಮಿತ ವ್ಯೋಮನೌಕೆಯಲ್ಲಿ ಅಂತರಿಕ್ಷ ಯಾನ  ಮಾಡಿದ ಕೀರ್ತಿ!!! ಮನಸಲ್ಲೇ ನಂಬಿದ ದೇವರಿಗೊಂದು ನಮನ... ಭಾರತ-ಅಮೇರಿಕಗಳ ಮೈತ್ರಿ ಯಿಂದ ಇಸ್ರೋ - ನಾಸಾ  ನಡುವೆ ನಡೆದ ಒಪ್ಪಂದದಂತೆ ಹಾಗೂ  ವ್ಯೋಮನೌಕೆಯನ್ನು ಫ್ಲೋರಿಡಾದ ಕೆನೆಡಿ ಸ್ಪೇಸ್ ಸೆಂಟರ್ ನ ರನ್ ವೇ ಯಲ್ಲಿ ಇಳಿಸಲಾಯಿತು.  ವ್ಯೋಮನೌಕೆಯಿಂದ ಹೊರಬರುತ್ತಲೇ ಇಸ್ರೋ ದಾ  ಹಿರಿಯ ವಿಜ್ಞಾನಿಗಳ ಸ್ವಾಗತ!!! ಅಭಿನಂದನೆಗಳ  ಮಹಾಪೂರ ... . ನಾಸಾದ ಹತ್ತಾರು ವಿಜ್ಞಾನಿಗಳ ಆತ್ಮೀಯ ಕೈಕುಲುಕಿನೊಂದಿಗೆ "Congratulations". ಇದೆಲ್ಲರ ಮಧ್ಯೆ ತನ್ನನ್ನು ತಾನೇ ಹೆಮ್ಮೆಯಿಂದ ಬೆನ್ನುತಟ್ಟಿಕೊಂಡ ಅನುಭವ...ಮುಂದೆ ಬಂದಂತೆ ನಾಸಾದ ಸೆಕುರಿಟಿ ಯವರೊಂದಿಗೆ ಅಮೇರಿಕಾದ ಪೊಲೀಸ್ ಸಹ ಬಂದರು... ಕೈಕುಲುಲಲೆಂದು  ಕೈ  ಮುಂದೆ ಮಾಡಿದರು ಅಂದು ಕೊಂಡರೆ ಅವರು ರೋಹಿತ್ ನ ಪಾಸ್ ಪೋರ್ಟ್ ಕೇಳಿದರು. ರೋಹಿತ್ ತಾನು ಇಸ್ರೋ ದ ವಿಜ್ಞಾನಿ, ಈಗಷ್ಟೆ ಅಂತರಿಕ್ಷ ಯಾನ ಮಾಡಿಬಂದಿರುವೆ ಎಂದು ಎಷ್ಟು ಹೇಳಿದರು ಅವರು ಕೇಳಲು ತಯಾರಿಲ್ಲ.. ರೋಹಿತ್ ಗೆ ಏನು ಮಾಡುವುದೆಂದೇ ತಿಳಿಯಲಿಲ್ಲ.. ಇಸ್ರೋ ದ ಹಿರಿಯ ಅಧಿಕಾರಿಗಳೂ ಅವರನ್ನು ಸಮಜಾಯಿನಲು ವಿಫಲರಾದರು. " I am Rohit from Indian space research organization, I don't have passport, please believe me and please leave me, please sir, please sir" ಎಂದು ಕೂಗಿಕೊಂಡ. "ಏನ್ರೀ ಏನಾಯ್ತು.....?ಯಾರಿಗೆ ಪಾಸ್ ಪೋರ್ಟ್ ಬೇಕು...? ನಿಮ್ಮ್ಹತ್ರ ಪಾಸ್ಪೋರ್ಟ್ ಎಲ್ಲಿದೆ..?ಏನಾಯ್ತು". ರೋಹಿತ್ ತನ್ನ ಸ್ಪೇಸ್ ಸೂಟ್ ತೆಗೆಯುತ್ತಾ ನೋಡಿದಾಗ ಗೊತ್ತಾಯಿತು ತಾನು ತೆಗೆಯುತ್ತಿರುವುದು ಹೊದ್ದುಕೊಂಡಿರುವ ಹೊದಿಕೆ, ಮಗುಲ್ಲಲ್ಲಿ ಮಲಗಿರುವುದು ಮಡದಿಯೆಂದು.... ಹೆಂಡತಿಯೆಂದಳು "ರೀ ಮಲಗಿ ಇನ್ನೂ ಮೂರು ಗಂಟೆಯಷ್ಟೆ... ನಾಳೆ ಡ್ಯೂಟಿಗೆ ಹೋಗಬೇಕಲ್ಲವೇ..?. "

Saturday, 30 July 2016

ಬಾಲ್ಯದ ಮಳೆಗಾಲ.....

ಏಪ್ರಿಲ್ ಮತ್ತು ಮೇ ತಿಂಗಳ ಬೇಸಿಗೆ ರಜೆಯ ನಂತರ ಜೂನ್ ತಿಂಗಳು ಬಂತಂದರೆ ಶಾಲೆ ಪುನರಾರಂಭದ ಸಂಭ್ರಮ. ಜೂನ್ ಒಂದಕ್ಕೆ ಶಾಲೆ ಶುರುವಾದರೆ ಜೂನ್ ೬ ರಿಂದ ಮಳೆಗಾಲ ಶುರುವಾಗುವ ವಾಡಿಕೆ. ಒಮೊಮ್ಮೆ ಸ್ವಲ್ಪ ಆಚೀಚೆ ಆದರೂ ಜೂನ್ ಮೊದಲ ವಾರಕ್ಕೆ ಮಳೆರಾಯ ಆಗಮನವತ್ತೂ ಖಚಿತ. ಹೊಸವರ್ಷದ ಹೊಸ ತರಗತಿಗೆ ಹೋಗುವ ಉತ್ಸಾಹ ಒಂದೆಡೆಯಾದರೆ ಮಳೆಯ ಕಿರಿಕಿರಿಯು ಅಕ್ಷರಸಃ ಉತ್ಸಾಹಕ್ಕೆ ತಣ್ಣೀರು ಎರೆಚುತಿತ್ತು. ಕರಾವಳಿಯ ಜಿಲ್ಲೆಗಳಲ್ಲಿ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ವರೆಗಿನ ವರುಣ ದೇವ ಮನೆಮಾಡುವುದು ಸಾಮಾನ್ಯ. ಕರಾವಳಿಯ ಮಳೆಯು ದಪ್ಪ-ದಪ್ಪಗಿನ ಹನಿಗಳಿಂದ ಕೂಡಿದ್ದು ಬೀಸುವ ಗಾಳಿಯಿಂದ ಓರೆಯಾಗಿ ಬೀಳುತ್ತಾ ನಮ್ಮನ್ನು ಒದ್ದೆಯಾಗಿಸುತ್ತದೆ. ಹಿಡಿದಿರುವ ಕೊಡೆ ಹೆಸರಿಗಷ್ಟೇ!!!. ಬಾಲ್ಯದಲ್ಲಿ ಮಳೆಯಲ್ಲಿ ತೊಯ್ದಕೊಂಡು ಶಾಲೆಗೆ ಹೋಗುತ್ತಿದ್ದದ್ದು, ಮಳೆ ನೀರಿನ ಆಟ, ಇತ್ಯಾದಿಗಳು ಎಂದಿಗೂ ಹಸಿ ಹಸಿ ನೆನಪುಗಳು!!!...


ನಮ್ಮ ಶಾಲೆಯ ಮನೆಯೊಂದ ಒಂದೂವರೆ ಕಿಲೋಮೀಟರ್ ದೂರದಲ್ಲಿತ್ತು. ಒಂದು-ಎರಡು ತರಗತಿಗಳಲ್ಲಿರುವಾಗ ಅಕ್ಕನ ಕೊಡೆಯೇ ಆಸರೆ. ಆವಾಗೆಲ್ಲ ಹತ್ತಿ ಬಟ್ಟೆಯ ಉದ್ದ ಕೋಲಿನ ಕೊಡೆಗಳು... ಕೊಟ್ಟ ದುಡ್ಡಿಗೆ ಸರಿಯಾಗಿ ಅವುಗಳ ದಪ್ಪ... ತೆಳ್ಳಗಿನ ಕೊಡೆ ಜೂನ್- ಜುಲೈ ನ ಜಡಿಮಳೆಯನ್ನು ತಡೆಯುವುದರಲ್ಲಿ ಸಂಪೂರ್ಣ ವಿಫಲ! ನೇರವಾಗಿ ಮಳೆಯ ಹನಿಯು ಮೈಗೆ ಬೀಳುವುದಿಲ್ಲ ಅಷ್ಟೇ!!  ತೂರಿಬಂದ ನೀರಿನ ಹನಿಗಳು ೧೫ ನಿಮಿಷದ ಮಳೆಯಲ್ಲಿ ನಮ್ಮನ್ನು ಒದ್ದೆಯಾಗಿಸುತಿತ್ತು... ದಪ್ಪನೆಯ ಬಟ್ಟೆಯ ಹಾಗೂ ಎರಡು ಹೊದಿಕೆಯ ಕೊಡೆಗಳೂ ಸಿಗುತಿದ್ದವಾದರೂ ಒದ್ದೆಯಾದ ಮಣಭಾರದ ಆ ಕೊಡೆಗಳನ್ನು ಹೊರುವುದೊಂದು ಸಾಹಸವೇ... ಒಂದೇ ಕೊಡೆಯ ಆಶ್ರಯದಲ್ಲಿ ಅಕ್ಕ ಮತ್ತು ನಾನು ಶಾಲೆಗೆ ಹೋಗುತಿದ್ದೆವು. ಚೀಲಕ್ಕೆ ಹಾಕಿದ ಪುಸ್ತಕಗಳು ಒದ್ದೆಯಾಗದಂತೆ ಪುಸ್ತಕಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ, ಇಬ್ಬರ ಮಧ್ಯ ಇಟ್ಟುಕೊಂಡು ಹೋಗುತಿದ್ದೆವು. ಕೈಯಲ್ಲೊಂದು ಬುತ್ತಿ-ಡಬ್ಬ...ಮಳೆಯಲ್ಲಿ ತೊಯ್ದ ಬುಟ್ಟಿಯಲ್ಲಿರುವ ಕೊಚ್ಚಿಗೆ ಅನ್ನ ಸಂಪೂರ್ಣ ತಣ್ಣಗಾಗಿರುತಿತ್ತು. ಇನ್ನೊಂದು ಸಮಸ್ಯೆಯಂದರೆ ಒದ್ದೆಯಾದ ಕೊಡೆಗಳನ್ನು ತರಗತಿಯ ಹೊರಗೆ ಕಟ್ಟಿರುವ ಸರಿಗೆಯಲ್ಲಿ ನೇತಾಕಿರಬೇಕಿತ್ತು... ತರಗತಿಗಳು ಮುಗಿದ ತಕ್ಷಣ ಬಂದರೆ ಕೊಡೆಗಳು ಇಟ್ಟ ಸ್ಥಳದಲ್ಲಿ ಸಿಗುತ್ತಿದ್ದವು...ಇಲ್ಲವಾದರೆ ಚಿಕ್ಕ-ಚಿಕ್ಕ ಕಳ್ಳ ಪೋರರು ಕೊಡೆಯನ್ನು ಎತ್ತಿಕೊಂಡೇ ಬಿಡುತ್ತಿದ್ದರು. ಕೊಡೆಗಳಲ್ಲಿ ಹೆಸರು ಬರೆದಿಡುವುದೂ ಅನಿವಾರ್ಯ. ತರಗತಿಗಳು ಮುಗಿಯುವ ಸಮಯದಲ್ಲಿ ಅಧ್ಯಾಪಕರು ಕೊಡೆಯಿಡುವ ಜಾಗಕ್ಕೆ ಬಂದು ನೋಡುತ್ತಾ ಆ ಕಳ್ಳ ಪೋರರಿಂದ ಕೊಡೆಗಳನ್ನು ರಕ್ಷಿಸುತಿದ್ದರು!!! ಶಾಲೆಯ ದಾರಿಯು ಮಣ್ಣೆನ ರಸ್ತೆಯಾಗಿದ್ದಲ್ಲದೆ ಏರಿಕೆಯದ್ದಾಗಿತ್ತು. ಚರಂಡಿಗಳಿಲ್ಲದ ಈ ರಸ್ತೆಯಲ್ಲಿ ಮಳೆಯನೀರು ಹರಿದುಹೋಗುವುದು ಸಾಮಾನ್ಯ. ಮಳೆ ಬಂದು ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಪಾಚಿ ಬೆಳೆದುಕೊಂಡಿದ್ದು ನಮ್ಮನ್ನು ಬೀಳಿಸಲು ಕಾದುಕೊಂಡಿರುತ್ತಿತ್ತು. ಹೆಜ್ಜೆಮೇಲೊಂದ್ ಹೆಜ್ಜೆಯನಿಟ್ಟುಕೊಂಡು ನಡೆಯಬೇಕಿತ್ತು...  ಆ ಜಾರಿಕೆಯ ರಸ್ತೆಯಲ್ಲಿ ಹಲವಾರು ಭಾರಿ ಬಿದ್ದು-ಎದ್ದು ಹೋಗುತಿದ್ದೆವು. ಕೆಲವೂಮ್ಮೆ ಒಬ್ಬರು ಜಾರಿ ಅವರನ್ನು ಬೀಳುವುದನ್ನು ತಡೆಯಲು ಹೋದೆ ಇನ್ನೊಬ್ಬರು, ಹಾಗೆ ಮತ್ತೊಬ್ಬರೂ ಬಿದ್ದು "ಸರಣಿ ಅಪಘಾತ"ಗಳಾಗುತ್ತಿದ್ದವು.
ಮಳೆಗಾಲ ಇನ್ನೊಂದು ಆಕರ್ಷಣೆಯೇ ಮಳೆಗಾಲದ ಬರುವಿಕೆಯ ಕೂಗಿ ಕೂಗಿ ಹೇಳುವ ಕಪ್ಪೆಗಳು!! ಹಿಂದಿನ ಮಳೆಗಾಲ ಮುಗಿಯುತ್ತಿದ್ದಂತೆ ಮಣ್ಣಿನಡಿ ಕಣ್ಮರೆಯಾಗಿದ್ದ ಕಪ್ಪೆಗಳು ಹೊರಬಂದು  "ವಾಟ್.. ವಾಟರ್..ವಾಟ್... ವಾಟರ್.."(what water?!!!...what water ?!!!) ಎನ್ನುತ್ತಾ ಮಳೆಗಾಲದ ಮುನ್ಸೂಚನೆ ಕೊಡುತ್ತವೆ. ಆ ಪುಟ್ಟ ಪ್ರಾಣಿಗೆ ಮಳೆಯ ಬರುವಿಕೆಯ ಭವಿಷ್ಯ ಹೇಗೆ ತಿಳಿಯುತ್ತದೆಯೋ ಗೊತ್ತಿಲ್ಲ... ಒಂದು ಶುರುಮಾಡಿದರೆ ಸಾಕು, ಅಲ್ಲೊಂದು-ಇಲ್ಲೊಂದು-ಮತ್ತೆಲ್ಲೋ ಇನ್ನೊಂದು ಹೀಗೆ ಅವುಗಳ ಜುಗಲ್ಬಂದಿ ಶುರು!!! ರಾತ್ರಿ-ಹಗಲೆನ್ನದೇ ಕೂಗಿ-ಕೂಗಿ ತನ್ನ ಸಂಗಾತಿಯನ್ನು ಕರೆದು ಸಂತಾನೋತ್ಪತ್ತಿ ಮಾಡುವುದೇ ಈ ಕೂಗಿನ ಮರ್ಮ... ಅದೇನೇ ಆಗಲಿ ನಮಗಂತೂ ಇಡೀ ದಿನ ಕರ್ಕಶ ಸಂಗೀತ ಕಛೇರಿ..! ಈ ಸಂಗೀತ ಕಛೇರಿಗೆ ಸಾಥ್ ಕೊಡುತಿದ್ದವು ಕರ್ಕಶ ಕೂಗಿನ ಜೀರಂಡೆಗಳು... ನಾವು ಸಣ್ಣದಿದ್ದಾಗ ಜೀರಂಡೆಗಳನ್ನು ನೋಡಲೇ ಇಲ್ಲ!!!. ಕಾಣಲು ಗುಪ್ತವಾಗಿರುವ ಇವುಗಳ ಕೂಗಿನ ಶಬ್ದ ಕೇಳಿದ ಹೊಸಬರು ಇದೇನು ಬ್ರಹತ್ ಗಾತ್ರದ ಪ್ರಾಣಿಯೇ ಅಂದುಕೊಳ್ಳಬೇಕು. ನಿಶಬ್ದದ ರಾತ್ರಿಯಲ್ಲಿ ಈ ಕರ್ಕಶ ಕೂಗು horror movie ಯ ಹಿಮ್ಮೇಳದಂತೆ ಕೇಳಿಸಿ ಭಯ ಹುಟ್ಟಿಸಿತಿತ್ತು... ಹಲವು ವರ್ಷಗಳ ನಂತರ ಜೀರಂಡೆ ಗಳ ಅಸಲೀ ಗಾತ್ರ ತಿಳಿದಾಗಲೇ ಆ ಭಯ ನಿವಾರಣೆಯಾಗಿದ್ದು... ಜೀರಂಡೆ ಗಳ ಈ "ಕ್ರಿ ಕ್ರಿ ಕ್ರಿ ಕ್ರಿ.... ..... " ಕೂಗಿನಿಂದಲೇ ಇವುಗಳಿಗೆ ಇಂಗ್ಲೀಷಿನಲ್ಲಿ  "Cricket" ಎಂದು ಕರೆದಿರಬೇಕು!!!. ಕಪ್ಪೆ-ಜೀರಂಡೆಗಳ ಹಿಮ್ಮೇಳದ ಮುಮ್ಮೇಳವೆನು ಗೊತ್ತೇ?... ಕಗ್ಗತ್ತಲ ರಾತ್ರಿಯಲ್ಲಿ ನಕ್ಷತ್ರದಂತೆ ಹೊಳೆಯುವ "ಮಿಂಚುಹುಳ"ಗಳು... ಬಾಲ್ಯದ ಕುತೂಹಲದ ನೈಸರ್ಗಿಕ ಕೌತುಕಗಳ ಪಟ್ಟಿಯಲ್ಲಿ ಇದೂ ಒಂದು. ಮರದ ರೆಂಬೆ-ಕೊಂಬೆಗಳಲ್ಲಿ ಸಾವಿರಾರು ಮಿಂಚುಹುಳಗಳು ಕೂತು ತನ್ನ ದೇಹವನ್ನು ಬೆಳಗುತ್ತಾ ಇಂದ್ರಜಾಲವನ್ನು ಸ್ರಷ್ಟಿಸುತಿದ್ದವು. ಆಗ ನಮಗೆ ವಿಸ್ಮಯವಾಗಿದ್ದ ಈ ಮಿಂಚುಹುಳ ಈಗ ಮಾಮೂಲೆನಿಸಿದರೂ ಇಂದಿಗೂ ಚಿಕ್ಕ ಮಕ್ಕಳು ಈ ಹುಳಗಳನ್ನು ಕುತೂಹಲದಿಂದಲೇ ನೋಡುತ್ತಾರೆ. ಹಿಂದಿನ ಕಾಲದಲ್ಲಿ ಕಾರ್ಮೋಡ ತುಂಬಿದ ಕಗ್ಗತ್ತಲೆಯ ರಾತ್ರಿಯಲ್ಲಿ ದಾರಿದೀಪಕ್ಕಾಗಿ ಮಿಂಚುಹುಳಗಳನ್ನು ಗಾಜಿನ ಬುರುಡೆಯಲ್ಲಿ ಹಾಕಿಕೊಂಡು ಹೋಗುತ್ತಿದ್ದರಂತೆ!!!
ಮೊದಲ ಮಳೆಯ ಮಾರನೇ ದಿನ ಮುಸ್ಸಂಜೆಯ ಇನ್ನೊಂದು ಕುತೂಹಲಕರ ವಿದ್ಯಮಾನವೇ "ಹಾರುವ ಇರುವೆಗಳು". ಸಂಜೆಯ ಸಮಯದಲ್ಲಿ ಎಲ್ಲಿ ನೋಡಿದರೂ ಅಲ್ಲಿ ಮಳೆಗೆ ಒದ್ದೆಯಾದ ನೆಲವನ್ನು ಕೊರೆದುಕೊಂಡು ಸಾಲು-ಸಾಲಾಗಿ ಇರುವೆಗಳು ಬರಲು ಪ್ರಾರಂಭಿಸುತ್ತವೆ.!!! ಹಾಗೆ ಬಂದ ಈ ಇರುವೆಗಳು ಕ್ಷಣ ಮಾತ್ರದಲ್ಲಿ ಬಾನಿನ ಮುಖಮಾಡಿ ಹಾರಲು ಶುರುಮಾಡುತ್ತವೆ.!!! ಅವುಗಳು ಹಿಂಡು ಹಿಂಡಾಗಿ ಬರುವುದು ಎಷ್ಟು ವಿಚಿತ್ರವೋ, ಅಷ್ಟೇ ವಿಚಿತ್ರ ಅವುಗಳ ಆಕಾಶಯಾನ... "ಇವುಗಳು ಹೋಗುವುದಾದರೂ ಎಲ್ಲಿಗೆ?... , ಸ್ವಲ್ಪ ಸಮಯದ ನಂತರ ವಾಪಸು ಬರುತ್ತವೆಯೇ?, ಇವುಗಳು ಇರುವೆಗಳೇ ಅಥವಾ ಕೀಟಗಳೇ ? ಮೊದಲ ಮಳೆ ಮಾರನೇ ದಿನವೇ ನೆಲದಿಂದ ಹೊರಬರುವುದಾದರೂ ಯಾವುದಕ್ಕೆ...?" ಹೀಗೆ ಸಾಲು ಸಾಲು ಪ್ರಶ್ನೆಗಳು ನಮ್ಮ ಮುಂದೆ ಬರುತ್ತಿದ್ದವು. ಅವಾಗ ಸಿಗುತ್ತಿದ್ದ ತಾತ್ಕಾಲಿಕ ಉತ್ತರ- " ಮಳೆಯ ನೀರು ಇರುವೆಗಳ ಗೂಡಿಗೆ ಹೋಗುವುದರಿಂದ ಇವುಗಳು ಮೇಲೇಳುತ್ತಿರುವುದು ".... ಸರಿಯಾದ ಕಾರಣವೇನು ಗೊತ್ತೇ?.... ನೆಲದಡಿಯ ಕಾಲೋನಿಗಳಲ್ಲಿರುವ ಈ ಇರುವೆಗಳು ಮಳೆ ಬಂದಾಕ್ಷಣ ಸಂತಾನೋತ್ಪತ್ತಿಗೆ ಸರಿಯಾದ ಸಮಯ ಎಂದುಕೊಂಡು ಹೆಣ್ಣು-ಗಂಡು ಎರಡು ಹೊರಬಂದು ಹಾರುತ್ತಾ ಮಿಲನವಾಗುತ್ತವೆ. ತನ್ನ ಜೀವನದ ಧ್ಯೇಯವನ್ನು ಪೂರೈಸಿದ ಗಂಡು ಇರುವೆ ಮಿಲನವಾದ ಕೆಲವೇ ಸಮಯದಲ್ಲಿ ಸತ್ತುಹೋದರೆ, ಹೆಣ್ಣು ಇರುವೆ ರೆಕ್ಕೆಗಳನ್ನು ಕಳಚಿಕೊಂಡು ತನ್ನ ಆಯ್ಕೆಯ ಜಾಗದಲ್ಲಿ ಕಾಲೋನಿ ಕಟ್ಟುತ್ತದೆ... ಕೀಟ ಪ್ರಪಂಚದ ಅನೇಕಾನೇಕ ವಿಸ್ಮಯಗಳಲ್ಲಿ ಇದೂ ಒಂದು.
ಬಾಲ್ಯದ ಮರೆಯಲಾಗದ ನೆನಪುಗಳನ್ನು ಇನ್ನೊಂದು ಪ್ರಮುಖವಾಗಿರುವುದು ವಿಚಿತ್ರವಾಗಿ, ಭಯಂಕರವಾಗಿ ಕೂಗುತ್ತಿದ್ದ ಒಂದು ಹಕ್ಕಿ... ಈ ಹಕ್ಕಿಯ ಕೂಗು ದಿನದುದ್ದಕ್ಕೂ ಕೇಳಿಬಂದರೂ ರಾತ್ರಿ ನಿಶಬ್ದವಾದಾಗ ಕೇಳಿದಾಗ ಬಾಯಹುಟ್ಟಿಸುತಿತ್ತು. "Thooo...Thu...Thoo " ಎಂದು ಕೂಗುವ ದನಿ ಅರ್ಧ ನಿದ್ರೆಯಿಂದೆದ್ದಾಗ ಕೇಳಿಸಿದರೆ ಅಂಜಿಕೆಯಿಂದ ತುಂಬಾ ಸಮಯ ನಿದ್ರೆಯೇ ಬರುತ್ತಿರಲಿಲ್ಲ. ಅದೆಷ್ಟೋ ವರ್ಷಗಳ ನಂತರ ಈಗ ಗೊತ್ತಾಗಿದ್ದು ಈ ಹಕ್ಕಿಯ ಹೆಸರು "Brain fever bird !!!". ನಾವು ಈಗಿರುವ ಕೈಗಾ ಪರಿಸರದಲ್ಲೂ ಇದು ಮಳೆಗಾಲದಲ್ಲಿ ಸಾಕಷ್ಟು ಕೂಗು ಕೇಳಿ ಬಂದರೂ ಕಾಣಸಿಗುವುದು ಅಪರೂಪವೇ. ಕೆಲವೇ ದಿನದ ಹಿಂದೆ ನನ್ನ ಕ್ಯಾಮರಾದಲ್ಲೂ ಸೆರೆಯಾಗಿದೆ!!. ಇದಕ್ಕೆ ಈ ಹೆಸರು ಬಂದಿರುವುದು ಅದರ ಕೂಗುವ ಶೈಲಿಗಷ್ಟೇ. ಇದೊಂದು ಕೋಗಿಲೆಯಂತೆ ಬೇರೆಹಕ್ಕಿಗಳ ಗೂಡಲ್ಲಿ ಮೊಟ್ಟೆಯಿಡುವ "ಪರಪುಟ್ಟ".
ಹೀಗೆ ಮಳೆಗಾಲ ಶುರುವಾದಂತೆ ನಮಗೆ ಜೀವಶಾಸ್ತ್ರದ ಪಾಠ. ಸಾಮಾನ್ಯವಾಗಿ ಕಾಣಸಿಗದ ಅನೇಕ ಜೀವಿಗಳು ಮಳೆಗಾಲದಲ್ಲಿ ಪ್ರತ್ಯಕ್ಷವಾಗಿ ನಮಗೆ ಅಚ್ಚರಿಯನ್ನೂ ಕುತೂಹಲವನ್ನೂ ತರುತ್ತಿದ್ದವು. ಮಳೆಗಾಲದ ಮೊದಮೊದಲಿನ ದಿನಗಳಲ್ಲಿ ಕಾಣಸಿಗುವ ಇನ್ನೊಂದು ಅಪರೂಪವೇ ಅಣಬೆ... ನೆಲದ ಒಳಗೇ ಹುಟ್ಟಿಬೆಳೆಯುವ ಕಲ್ಲಣಬೆ ಒಂದು ಜಾತಿಯದಾದರೆ, ನೆಲದ ಮೇಲೆ ಹುಟ್ಟಿ ಕೊಡೆಯಂತೆ ಬೆಳೆಯುವ 'ನಾಯಿಕೊಡೆ' ಗಳು ಇನ್ನೊಂದು ಜಾತಿ.
ಈ ನಾಯಿಕೊಡೆಯಲ್ಲೂ ವಿವಿಧ ಗಾತ್ರ, ವಿವಿಧ ಬಣ್ಣ, ಆಕಾರ. ಕೆಲವು ಕೆಲವೇ ಮಿಲಿಮೀಟರ್ ವ್ಯಾಸದಾದರೆ, ಇನ್ನುಕೆಲವು ೧೫-೨೦ ಸೆ. ಮೀಟರ್ ಗಾತ್ರದವುಗಳು. ಇನ್ನುಕೆಲವು ಮಡಚಿದ ಕೊಡೆಯಂತಿದ್ದು 'ಯಾವತ್ತು ಬಿಡಿಸಿಕೊಳ್ಳುತ್ತವೆ' ಎಂದು ನಮ್ಮನ್ನು ಒಂದಿಷ್ಟು ದಿನ ಕುತೂಹಲದಿಂದ ಕಾಯಿಸಿ ನಂತರ ಹಾಗೆಯೇ ಕೊಳೆತು ಹೋಗುತ್ತಿದ್ದವು. ಇನ್ನುಕೆಲವು ಸತ್ತ ಮರಗಳ ಮೇಲೆ ಬೆಳೆಯವ ಅತೀ ವಿಚಿತ್ರ ಆಕಾರ-ಬಣ್ಣ-ವಿನ್ಯಾಸದ ಅಣಬೆ.!!! ಒಂದೆರಡು ದಿನಗಳಲ್ಲಿ ಅತೀ ವೇಗವಾಗಿ ಬೆಳೆದು ಅದೇ ವೇಗದಲ್ಲಿ ಕೊಳೆತುಹೋಗುವ ಅಣಬೆಗಳೂ ಕುತೂಹಲ ತರುತ್ತಿದ್ದವು.
ಮಳೆಗಾಲ ಶುರುವಾಯಿತೆಂದರೆ ಭೂಮಿಮೇಲಿರುವ ಎಲ್ಲ ಸಸ್ಯ ಸಂಕುಲಗಳಿಗೆ ಚಿಗುರೊಡೆಯುವ ಸಂಭ್ರಮ... ಇನ್ನುಕೆಲವು ಬೀಜ ಮೊಳಕೆಯೊಡೆದು ಗಿಡವಾಗುವ ಪ್ರಕ್ರಿಯೆ... ಬಾಲ್ಯದಲ್ಲಿ ಕೌತುಕವೆನಿಸಿರುವ ಸಸ್ಯಒಂದಿದೆ. ಖಾಲಿ ಬರಡೆಣಿಸಿರುವ ಜಾಗದಿಂದ ಮೇಲೇಳುವ ಈ ಗಿಡ ಒಂದು ಬಳ್ಳಿ.... ಮೊದಲ ಮಳೆಯಾಗುತ್ತಿದ್ದಂತೆ ಭೂಮಿಯನ್ನು ಸೀಳಿ ಚಿಗುರೊಡೆಯುವ ಈ ಬಳ್ಳಿ ಹಚ್ಚ ಹಸಿರಾಗಿ ಉದ್ದನೆ ಬೆಳೆಯುತ್ತಾ ಸಮೀಪದಲ್ಲಿರುವ ಕ್ಷಿಪ್ರವಾಗಿ ಮರಗಳನ್ನು ಆಲಂಗಿಸುತ್ತ ಬೆಳೆಯುತಿತ್ತು. ನಮಗಾಗುವ ಆಶ್ಚರ್ಯವೆಂದರೆ ಸುಮಾರು ೩-೪ ಮೀರಟ್ ಬೆಳೆದರೂ ಈ ಬಳ್ಳಿಯಲ್ಲಿ ಎಲೆಗಳೇ ಇರುತ್ತಿರಲಿಲ್ಲ!!!!...ಸಾಮಾನ್ಯವಾಗಿ ಬೀಜದಿಂದ ಮೊಳೆಕೆಯೊಡೆಯುವ ಗಿಡಗಳು ಇಷ್ಟು ಕ್ಷಿಪ್ರವಾಗಿ ಬೆಳೆಯುವುದಿಲ್ಲ... ಇದರಲ್ಲೇನಿದೆ ಅಸಾಮಾನ್ಯ ಕೌತುಕ?... ಭೂಮಿಯಲ್ಲಿ  ಅಡಿಗಿರುವ ಇವುಗಳ ಗಡ್ಡೆಯೇ ಇದರ ಹಿಂದಿನ ಗುಟ್ಟು....ಇದರಂತೆ ಹಲವಾರು ಗಡ್ಡೆ-ಗೆಣಸುಗಳ ಗಿಡಗಳೂ ಸಹ ವಿಚಿತ್ರ ಅನಿಸುತಿತ್ತು.... ಮಳೆ ಬರುತ್ತಿದಂತೆ ಭೂಮಿಯನ್ನು ಸೀಳಿ ಕೆಲವೇ ದಿನಗಳಲ್ಲಿ ೧-೨ ಚದರ ಮೀಟರ್ ನಷ್ಟು ಜಾಗಕ್ಕೆಲ್ಲ ಚಪ್ಪರ ಹಾಕುತಿತ್ತು....
ಮಳೆಗಾಲದ ಜಡಿಮಳೆಯಲ್ಲಿ ಹೊರಾಂಗಣದ ಆಟಗಳೆಲ್ಲ ನಿಲ್ಲಿಸಬೇಕಾಗುತಿತ್ತು. ಆಗೊಮ್ಮೆ ಈಗೊಮ್ಮೆ ಮಳೆನಿಂತಾಗ ಅಲ್ಪ ಸ್ವಲ್ಪ ಆಟ ... ಈಗಿನಂತೆ ಮೊಬೈಲಾಗಲಿ ಟಿವಿಯಾಗಲಿ ಇರುತ್ತಿರಲಿಲ್ಲ. ಹಾಗಂತ ಯಾವತ್ತೂ ನಮಗೆ ಬೇಜಾರಾಗುತ್ತಿರಲಿಲ್ಲ.!! ಕಾರಣ ನಮ್ಮ ಒಳಂಗಾಣದ ಆಟಗಳು.... ಅವಿಭಕ್ತ ಕುಟುಂಬವಾಗಿದ್ದರಿಂದ ಮನೆಯಲ್ಲಿ ನಾವು ಹಲವಾರು ಮಕ್ಕಳಿರುತ್ತಿದ್ದೆವು. ಕಣ್ಣಾಮುಚ್ಚಾಲೆ, ಕಳ್ಳ-ಪೊಲೀಸ್, ಪಗಡೆಯಾಟ, ಚೆನ್ನೆಮಣೆ.. ಹೀಗೆ ಹಲವಾರು ಆಟಗಳು ನಮ್ಮ ಆವಾಗಿನ ಒಳಾಂಗಣದ ಆಟಗಳು. ಕರೆಂಟಿಲ್ಲದ ಮಳೆಗಾಲದ ಕತ್ತಲ ದಿನಗಳಲ್ಲಿ ಅಡಗಿಕೊಳ್ಳಲು ಅಸಂಖ್ಯ ಜಾಗವಿದ್ದು ಕಣ್ಣಾಮುಚ್ಚಾಲೆ ಅತೀ ಸಾಮಾನ್ಯ ಆಟ!!! ಅದಲ್ಲೆಡೆ ನಾವೆಲ್ಲ ಸೇರಿ ನಾಟಕ ಕಂಪೆನಿಯನ್ನೇ ಕಟ್ಟಿಕೊಂಡಿದ್ದೆವು!!! ಪಾಠದಲ್ಲಿ ಬರುವ, ವಾರ್ಷಿಕೋತ್ಸವದಲ್ಲಿ ಅಭ್ಯಸಿಸಿರುವ ಅಥವಾ ರೇಡಿಯೋದಲ್ಲಿ ಪ್ರಸಾರವಾಗಿದ್ದ ನಾಟಕಗಳ ಅಭಿನಯ ಮಾಡುತಿದ್ದೆವು. ಸ್ವಯಂ ನಿರ್ದೇಶಿಸಿ ಅಭಿನಯಿಸಿರುವ ಈ ನಾಟಕಗಳಿಗೆ ಹೆಚ್ಚಾಗಿ ಪ್ರೇಕ್ಷಕರು ನಾವೇ!!!. "ಹುಲಿ ಮತ್ತು ಬ್ರಾಹ್ಮಣ" "ಶಿಭಿಚಕ್ರವರ್ತಿ ಮತ್ತು ಬೇಡ" ಇವುಗಳು ಪ್ರಸಿದ್ಧ ನಾಟಕಗಳು. ಆಗಸ್ಟ್ ತಿಂಗಳು  ಬಂತೆಂದರೆ ಸ್ವಾತಂತ್ರ್ಯ ದಿನಾಚರಣೆಯ ತಯಾರಿ. ಶಾಲೆಯಲ್ಲಿ ಅಭ್ಯಸಿಸಿರುವ ದೇಶಭಕ್ತಿ ಗೀತೆಗಳ ಸಮೂಹಗಾನವೂ ನಡೆಯುತಿತ್ತು. " ಭಾರತೀಯರು...ನಾವು ಭಾರತೀಯರು.| ಭರತ ಮಾತೇ ನಮ್ಮ ಮಾತೇ ಭಾರತೀಯರು |" ನಮ್ಮ ಶಕ್ತಿ ಮೀರಿ ಕೂಗುತಿದ್ದರೂ ಮನೆಯಲ್ಲಿ ಯಾರೂ ಬೈಯುತಿರಲಿಲ್ಲ. ಕಾರಣ ಹೊರಗಿನ ಮಳೆಯ ಆರ್ಭಟ... ಧೋ ಎಂದು ಸುರಿಯುವ ಮಳೆಯಲ್ಲಿ ನಾವು ಕೋಗಿದ್ದು ನಮಗೇ ಕೇಳದ ಪರಿಸ್ಥಿತಿ...
ಇನ್ನು ಮನೆಯ ಮುಂದೆ ಹರಿಯುತಿದ್ದ ಸಣ್ಣದೊಂದು ತೋಡು (ಮಳೆಗಾಲದಲ್ಲಿ ಹರಿಯುವ ಸಣ್ಣ ಕಾಲುವೆ...) ನಮ್ಮ ಹಲವಾರು ವಿಸ್ಮಯಗಳ ಭಂಡಾರ, ಕ್ರಿಯಾಶೀಲತೆಯ ಆಗರ!!! ಅಲ್ಲಿ ಮೊಟ್ಟೆಯಿಟ್ಟು ಮರಿಮಾಡುವ ಕಪ್ಪೆಗಳ ಜೀವನಚಕ್ರವನ್ನು ಅತ್ಯಂತ ಕೂಲಂಕುಷವಾಗಿ ವೀಕ್ಷಿಸುತಿದ್ದೆವು. ಕೊಳೆಯುತ್ತಿರುವ ಎಲೆಗಳ ನಡುವೆ ನೊರೆಯಂತಿರುವ ಮೊಟ್ಟೆ ರಾಶಿ... ಕೆಲವೇ ದಿನಗಳಲ್ಲಿ ಹೊರಬರುತ್ತಿದ್ದ ಚಿಕ್ಕದಾದ ಮೀನಿನಂತೆ ಬಲವಿರುವ ಗೊದ ಮೊಟ್ಟೆ ಮರಿ ಕಪ್ಪೆಗಳು.. ಕೆಲವೇ ದಿನಗಳಲ್ಲಿ ಬಾಲಕಳಚಿಕೊಂಡು ಕಪ್ಪೆಯರೂಪ ಪಡೆಯುವುದು.... ಪಾಠದಲ್ಲಿ ಬರುವ ಕಪ್ಪೆಯ ಜೀವನ ಕ್ರಮದ ಪ್ರತ್ಯಕ್ಷ ಉದಾಹರಣೆಗಳಾಗಿದ್ದವು. ಹಾಗೆ ಕೆಲವೊಮ್ಮೆ ಕಪ್ಪೆಯನ್ನು ಹಿಡಿಯಲು ಬರುತ್ತಿದ್ದ ನೀರುಹಾವುಗಳು  ಭಯವನ್ನು ತರುತಿದ್ದರೂ ನೀರಾಟವನ್ನು ಮಾತ್ರ ನಿಲ್ಲಿಸಿರುತ್ತಿರಲಿಲ್ಲ. ...!! ಆ ಸಣ್ಣ  ಕಾಲುವೆಯಲ್ಲಿದೋಣಿಯಾಟ ಇನ್ನೊಂದು ವಿನೋದ... ಕೆಸುವಿನ ಎಳೆಯ ಮೇಲೆ ಸಣ್ಣ ಕಲ್ಲನ್ನಿಟ್ಟು  ನಾವಿಕನನ್ನಾಗಿ ಮಾಡಿ ತೋರಿಬಿಡುತಿದ್ದೆವು. ಹಾಗೆ ಬಿಟ್ಟ ನಾವೆ ನೀರಿನ ಹರಿವಿನ ಕಡೆಗೇ ಸಂಚರಿಸಿ ಕೊನೆಯಲ್ಲಿ ಜಲಪಾತದಲ್ಲಿ ಬಿದ್ದು ನಮ್ಮ ಆಟ  ಮುಕ್ತಾಯವಾಗುತಿತ್ತು. ಆ ಕಾಲುವೆಗೊಂದು ಅಣೆಕಟ್ಟನ್ನು ಕಟ್ಟುವುದು...ಅದರ ನೀರನ್ನು ಸ್ವಲ್ಪ ಎತ್ತರದ ಜಾಗಕ್ಕೆ ಹರಿಸಿ, ಅಲ್ಲಿ ನಾಟಿಮಾಡುವುದು... ಇತ್ಯಾದಿ ಕ್ರಿಯಾಶೀಲತೆಯ ಆಟಗಳು ಮಳೆನಿಂತು ಇನ್ನೊಂದು ಮಳೆಬರುವ ಮುಂಚೆ ನಡೆಯುತ್ತಿದ್ದವು.
ಮಳೆಗಾಲದ ಅಡುಗೆಗಳಲ್ಲಿ ಅತೀ ಅಪರೂಪವಾದ ರುಚಿಕರವಾದ "ಹುರುಳಿ ಸಾರು" ಮರೆಯಲಾಗದ ನೆನಪು. ಹುರುಳಿಸಾರು ಈವಾಗಲೂ ಮಾಡುತ್ತಿವೆ. ಆದರೆ ಆವಾಗ ೨-೩ ಕಿಲೋ ಹುರುಳಿ ಬೇಯಿಸಿ ರಸವನ್ನು ತೆಗೆಯುತಿದ್ದರಿಂದ ಅದರ ರುಚಿ ಅತೀ ಅದ್ಭುತವಾಗಿತ್ತು. ಜಡಿಮಳೆಯಲ್ಲಿ ದೇಹವನ್ನು ಬೆಚ್ಚಗಿರಿಸಲು ಹುರುಳಿಸಾರು ಅವಶ್ಯಕವೂ ಆಗಿತ್ತು. ಬೇಯಿಸಿದ ಹುರುಳಿಯನ್ನು ದನ-ಕೋಣಗಳಿಗೆ ಹಾಕಲಾಗುತಿತ್ತಾದರೂ ವರ್ಷದಲ್ಲಿ ಒಂದೆರಡು ಭಾರಿ ಹುರುಳಿಕಾರಿನ್ನು ತೆಂಗಿನ ತೂರಿ-ಬೆಲ್ಲ ಹಾಕಿ  ಕೊಟ್ಟು ಉಸುಲಿಯನ್ನು ಮಾಡಲಾಗುತಿತ್ತು... ವಾಹ್... ಉಉಮ್ಮಾ ಎಂತಾ ರುಚಿ... ನೆನಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರುಬರುತ್ತದೆ. ಈವಾಗಿನಂತೆ ಮನೆಯಲ್ಲಿ ಚಾಕಲೇಟ್-ಬಿಸ್ಕೆಟ್ ಇಟ್ಟುಕೊಂಡು ನೆನಪಾದಾಗಲೆಲ್ಲ ತಿನ್ನುವ ಕಾಲವಲ್ಲ!!.. ಚಾಕಲೇಟ್-ಬಿಸ್ಕೆಟ್ ಸಿಗುವುದೇ ಅತೀ ಅಪರೂಪ... 
ಜುಲೈ ತಿಂಗಳಲ್ಲಿ ಬರುವ ಪ್ರಥಮನ ಏಕಾದಶಿಯೂ ಮರೆಯಲಾಗದ ನೆನಪು. ಮನೆಯ ದೊಡ್ಡವರೆಲ್ಲ ಮಧ್ಯಾಹ್ನ ಮಾತ್ರ ಊಟ ಮಾಡುತಿದ್ದರು. ಬೆಳ್ಳಿಗ್ಗೆ ೧-೨ ಹಲಸಿನ ಹಪ್ಪಳ, ಒಂದು ಲೋಟ ಕಷಾಯವಾದರೆ ರಾತ್ರಿಗೆ ಹೆಸರುಬೇಳೆ ಪಾಯಸ... ನಾವು ಮಾಮೂಲಿನಂತೆ ಊಟ ಮಾಡುವುದಲ್ಲದೆ ಹಪ್ಪಳ-ಪಾಯಸ ಎಲ್ಲಾ ತಿಂದು "ಸುಬ್ಬಮ್ಮನ ಉಪವಾಸ" ಮಾಡುತ್ತಿದ್ದೆವು. ರಾತ್ರಿ ಅಪ್ಪ ಮತ್ತು ದೊಡ್ಡಪ್ಪ ಸೇರಿ ಪವಮಾನ ಪಾರಾಯಣ ಮಾಡುತಿದ್ದರು. "ಸ್ವಾದಿಷ್ಠಯಾ ಮದಿಷ್ಠಯಾ ಪವಸ್ವ ಸೋಮ ಧಾರಯಾ। ಇಂದ್ರಾಯ ಪಾತವೇ ಸುತಃ।। .......  " ಮೂರೂ ಜನರ ಒಂದೇ ಧಾಟಿಯಲ್ಲಿ ಮೂಡಿಬರುತ್ತಿದ್ದ ಆ ವೇದ ಮಂತ್ರ ನಮ್ಮನ್ನು ರೋಮಾಂಚನಗೊಳಿಸುತಿತ್ತು.
ಮಳೆಗಾಲದ ಕಹಿ ನೆನಪವೊಂದಿದೆ... ಅದು ಕರ್ಕಾಟಕ ಅಮಾವಾಸ್ಯೆಯಂದು ಮಾಡಲಾಗುತ್ತಿದ್ದ ಹಾಲೆ ಮರದ ಕೆತ್ತೆಯ ಕಷಾಯ.. ಕಹಿ-ಕಹಿ ವಿಷದಂತಿರುವ ಕಷಾಯವನ್ನು ಬೆಳ್ಳಿಗ್ಗೆ ಹಲ್ಲುಜ್ಜಿದಾಕ್ಷಣ ಕುಡಿಯಬೇಕಾಗಿತ್ತು....ಕುಡಿದ ಅರ್ಧ ಗಂಟೆಯಷ್ಟು ಹೊತ್ತು ಬಾಯೆಲ್ಲ ಕಹಿಯಾಗಿರುತಿತ್ತು.  ಕರ್ಕಾಟಕ ಅಮಾವಾಸ್ಯೆಯಂದು ಹಾಲೆ ಮರದ (Alstonia scholaris) ತೊಗಟೆಯನ್ನು ಬೆಳ್ಳಂಬೆಳ್ಳಿಗ್ಗೆ ತಂದು ಅರೆದು ಮೊಸರು ಹಾಕಿ ಕಷಾಯ ಮಾಡಿ ಕುಡಿಯುವುದು ಕರಾವಳಿ ಕರ್ನಾಟಕದ ಸಂಪ್ರದಾಯ. ಪೂರಾ ಒಂದು ವರ್ಷದ ಎಲ್ಲ ಕಾಯಿಲೆಗಳು ದೂರವಾಗುತ್ತವೆ ಎಂಬ ನಂಬಿಕೆ... ಆಯುರ್ವೇದದಲ್ಲೂ ಹೋಮಿಯೋಪಥಿ ಔಷಧ ಪದ್ಧತಿಯಲ್ಲೂ ಇದರ ಪ್ರಯೋಗವಾಗಿದೆಯಂತೆ.... ಈವಾಗಲೂ ನಮ್ಮ ಮನೆಯಲ್ಲಿ ಹಾಲೆ ಕೆತ್ತೆಯ ಕಷಾಯ ಮಾಡಿ ಕುಡಿಯುತ್ತಾರೆ. ನಾವಿರುವ ಕೈಗಾ ಪರಿಸರದಲ್ಲೂ ಈ ಮರಗಳು ಇದ್ದರೂ ಅದರ ಸರಿಯಾದ ಪರಿಚಯು ಇಲ್ಲದ ಕಾರಣ ನಾವು ಉಪಯೋಗಿಸುತ್ತಿಲ್ಲ.

ಮಳೆಗಾಲದ ನೆನಪುಗಳು ಯಾವಾಗಲೂ ಹಸಿ-ಹಸಿ, ಅಂದರೆ ತಾಜಾ... ಮಳೆಗಾಲದಲ್ಲಿ ಎಷ್ಟು ಒಣಗಸಿದರೂ ಒಣಗದ ಒಳಉಡುಪಿನ ಹಾಗೆ. 

Friday, 8 July 2016

ಒಂದು ಗೂಡಿನ ಕಥೆ...

ಸುಮಾರು ಎರಡು ವರ್ಷಗಳ ಹಿಂದೆ ಅಡುಗೆ ಮನೆಯ ಬಾಲ್ಕನಿಯಲ್ಲಿ ರಟ್ಟಿನ ಪೆಟ್ಟಿಗೆಯನ್ನು“ಗೂಡು ಪೆಟ್ಟಿಗೆ” (nest box) ಯಾಗಿ ಜೋಡಿಸಿದ್ದೆವು. ವಿರಳವಾಗಿ ಕಾಣಿಸುವ ಗುಬ್ಬಚ್ಚಿಗಳನ್ನು ಗೂಡು ಕಟ್ಟಲು ಆಕರ್ಷಿಸುವ ಉದ್ದೇಶವಾಗಿತ್ತು. ಆದರೆ ಗುಬ್ಬಚ್ಚಿಯ ಬದಲಿಗೆ ಮುನಿಯಾ ಜಾತಿಗೆ ಸೇರಿದ “ಕಪ್ಪು ಗಂಟಲಿನ ಮುನಿಯಾ” ಸಂಸಾರ ಮಾಡಲು ಶುರು ಮಾಡಿದವು. ಒಮ್ಮೆ ವಂಶಾಭಿವೃದ್ಧಿ ಮುಗಿದ ಮೇಲೆ ಮತ್ತೊಮ್ಮೆ,ಅದಾದ ಮೇಲೆ ಮಗದೊಮ್ಮೆ, ಹೀಗೆ ಗೂಡು ಕಟ್ಟಿ ಮರಿ ಮಾಡುತ್ತಿದ್ದವು. ಸುಮಾರು ಎರಡರಿಂದ ಎರಡೂವರೆ ತಿಂಗಳಿಗೊಮ್ಮೆ ಮರಿ ಹಾಕುತ್ತಿದ್ದವು. ಒಂದೇ ಜೋಡಿ ಹಕ್ಕಿಗಳೋ ಅಥವಾ ಬೇರೆ ಜೋಡಿಗಳೋ ಗೊತ್ತಿಲ್ಲ….ಒಮ್ಮೆ ಎರಡು ಜೋಡಿ ಹಕ್ಕಿಗಳು ಗೂಡಿಗಾಗಿ ಕಾದಾಡುತ್ತಿದ್ದವು. ಜಗಳವು ಸುಮಾರು 15 ನಿಮಿಷ ನಡೆದು, ಎರಡನೆಯದಾಗಿ ಬಂದ ಜೋಡಿ ಗೂಡು ಬಿಡುವುದರಲ್ಲಿ ಮುಕ್ತಾಯವಾಯಿತು. ಇದನ್ನು ನೋಡಿ ಇನ್ನೊಂದು“ಗೂಡು ಪೆಟ್ಟಿಗೆ” ಯನ್ನು ಇಟ್ಟರೆ ಹೇಗಾದೀತು ಎಂದುಕೊಂಡೆ. ಬೆಡ್‍ರೂಮಿನ ಬಾಲ್ಕನಿಯಲ್ಲಿ ಇನ್ನೊಂದು ಪೆಟ್ಟಿಗೆಯನ್ನು ಬಾಲ್ಕನಿಯ ಗ್ರಿಲ್‍ಗೆ ಜೋಡಿಸಿದೆ. ಆ ಬಾಲ್ಕನಿಯಲ್ಲಿ ಹಕ್ಕಿಗಳು ಬರುತ್ತಿದ್ದರೂ ಗೂಡು ಕಟ್ಟಿರಲಿಲ್ಲ. ಬಹುಷಃ ಕಡಿಮೆ ಎತ್ತರದಲ್ಲಿ ಗ್ರಿಲ್‍ಗೆ ಜೋಡಿಸಿರುವುದರಿಂದ ಅಸುರಕ್ಷಿತ ಅನಿಸಿರಬೇಕು.
ಸುಮಾರು ಒಂದು ತಿಂಗಳ ನಂತರ ಒಮ್ಮೆ ಬೇರೊಂದು ಕಪ್ಪು-ಬಿಳಿ ಬಣ್ಣದ ಹಕ್ಕಿ ಹೊಸದಾಗಿ ಇಟ್ಟ ಪೆಟ್ಟಿಗೆಗೆ ಹೋಗಿ ಬರುವುದು ಕಾಣಿಸಿತು…“ಗೂಡು ಪೆಟ್ಟಿಗೆ” ಗೂಡುಕಟ್ಟಲು ಸೂಕ್ತವಾದ ಜಾಗವೆಂದು ತಿಳಿದ ಆ ಹಕ್ಕಿ, ಗೂಡು ಕಟ್ಟಲು ಶುರು ಮಾಡಿತು. ಅದರ ಫೋಟೋ ತೆಗೆದು ಅಂತರ್ಜಾಲದಲ್ಲಿ ಹುಡುಕಿದಾಗ ಅದು“ಒರಿಯಂಟಲ್ ಮ್ಯಾಗ್‍ಪೈ ರಾಬಿನ್” (Oriental Magpie Robin) ಅಂತ ತಿಳಿಯಿತು. ಕನ್ನಡದಲ್ಲೇನು ಹೆಸರು ಎಂದು ತಿಳಿಯಲಿಲ್ಲ… ಈ ರಾಬಿನ್ ಹಕ್ಕಿಯ ಗೂಡು ಮುನಿಯಾದ ಗೂಡಿನಂತಿರದೆ ತಟ್ಟೆ ಅಥವಾ ಬುಟ್ಟಿಯಾಕಾರದಲ್ಲಿತ್ತು. ಮೊದ ಮೊದಲು ಪಾಚಿಯಂತಹ ಜೌಗು ಪ್ರದೇಶದಲ್ಲಿ ಬೆಳೆಯುವ ಪ್ರಾಥಮಿಕ ಸಸ್ಯ (Premitive plant) ಗಳನ್ನು ತರುತಿತ್ತು. ನಂತರ ತೆಳ್ಳಗಿನ ಕಡ್ಡಿಗಳನ್ನು, ಹೆಚ್ಚಾಗಿ ಕೂಡು ಎಲೆಗಳ (compound leaf) ದಂಟನ್ನು ತರುತಿತ್ತು. ಪಾಚಿಯಂತಹ ಸಸ್ಯಗಳ ಉಪಯೋಗವೇನು? ತಿಳಿಯಲಿಲ್ಲ…ಸಂಜೆಯ ಸಮಯದಲ್ಲಿ ರಾಗವಾಗಿ ಕೂಗುತಿತ್ತು…ಸಾಮಾನ್ಯವಾಗಿ ಕೂಗು ಸಂಕ್ಷಿಪ್ತವಾಗಿದ್ದರೆ ಸಂಜೆಯ ಹೊತ್ತಲ್ಲಿ ಉದ್ದನೆಯ ರಾಗವಾಗಿತ್ತು. ಹೆಣ್ಣು ಹಕ್ಕಿಯೊಂದೇ ಗೂಡು ಕಟ್ಟುತಿತ್ತು…ಗಂಡು ಹಕ್ಕಿ ಆಗಾಗ್ಯೆ ಬಂದು ಹೋಗುತಿತ್ತು…ಅದಕ್ಕೆ ಗೂಡಿನ ರಕ್ಷಣೆಯ ಹೊಣೆ.!! ದೂರದಲ್ಲಿದ್ದು ಅಪಾಯದ ಸೂಚನೆಯನ್ನು ಕೂಗಿ ಹೇಳತಿತ್ತು… ಆದರೂ ಗಂಡು ಹಕ್ಕಿ ಬರೀ ಹೆದರುಪುಕ್ಕಲ…ಬೆಡ್‍ರೂಮಲ್ಲಿ ಕಾಣಿಸಿದರೂ‘ಪುರ್ರ್‍ರ್ರ್’ ಎಂದು ಹಾರಿ ಹೋಗುತಿತ್ತು. ಹೆಣ್ಣು ರಾಬಿನ್ ಮಾತ್ರ ತುಂಬಾ ಧೈರ್ಯವಂತೆ!!…ಬಾಲ್ಕನಿಗೆ ಹೋದರೂ ಹಾರುತ್ತಿರಲಿಲ್ಲ!!…ಏನಾದರೂ ಅಪಾಯದ ನೂಚನೆ ಇದ್ದರೆ ಮಾತ್ರ ಹಾರುತಿತ್ತು..! ದಿನ ಕಳೆದಂತೆ ಇನ್ನೂ ಸಲಿಗೆಯಾಯಿತು. ಎಷ್ಟೆಂದರೆ ಒಮ್ಮೆಯಂತೂ ನಾನು ಅರ್ಧ ಅಡಿ ಹತ್ತಿರದಿಂದ ಫೋಟೋ ಕ್ಲಿಕ್ಕಿಸಿದ್ದೆ. 10-12 ದಿನಗಳಲ್ಲಿ ಗೂಡು ರೆಡಿಯಾಯಿತು…ಹೆಣ್ಣು ಹಕ್ಕಿ ರಾತ್ರಿ ಕೂತು ಮೊಟ್ಟೆಯಿಡಲು ಶುರುಮಾಡಿತು…ದಿನಕ್ಕೊಂದಂತೆ 4ಮೊಟ್ಟೆಗಳನ್ನಿಟ್ಟಿತು. ತಿಳಿ ನೀಲಿ ಬಣ್ಣದ, ಕಂದು ಚುಕ್ಕೆಯಿರುವ, ಸುಮಾರು 15-20 ಮಿಮಿ ದೊಡ್ಡದಾದ, ಸರಿ ಸುಮಾರಿಗೆ ದುಂಡಗಿನ ಮೊಟ್ಟೆಗಳು ಬುಟ್ಟಿಯಾಕಾರದ ಗೂಡಿನ ಮಧ್ಯದಲ್ಲಿದವು…ಶ್ರೀಮತಿ ರಾಬಿನ್‍ಗೆ 24ಗಂಟೆಯೂ ಕಾವು ಕೊಡುವ ಕೆಲಸ…!! ಮಧ್ಯೆ ಒಮ್ಮೊಮ್ಮೆ ಹೋಗಿ ಆಹಾರ ತಿಂದು ಬರುತಿತ್ತು…ಒಂದು ಬಾಳೆಹಣ್ಣಿನ ತುಂಡನ್ನು ನೋಡೋಣವೆಂದು ಗ್ರಿಲ್ ಮೇಲೆ ಇಟ್ಟೆನು… ಹಕ್ಕಿ ಬಾಳೆಹಣ್ಣನ್ನೂ ತಿಂದಿತು… ಹಸಿವಾಗಿರಬೇಕಲ್ಲವೇ?ಸಾಮಾನ್ಯವಾಗಿ ಹುಳ-ಕೀಟಗಳನ್ನು ತಿನ್ನುವ ರಾಬಿನ್ ಆಗೊಮ್ಮೆ-ಈಗೊಮ್ಮೆ ಸಣ್ಣ ಹಣ್ಣುಗಳನ್ನೂ ತಿನ್ನುವುದಿದೆಯಂತೆ…
ಈ ಮಧ್ಯೆ ಮೊದಲನೇ ಬಾಲ್ಕನಿಯ ಮುನಿಯಾ ಗೂಡಿಗೆ ಬೇರೋಂದು ಜೋಡಿಯಿಂದ ಪೈಪೋಟಿ ಶುರವಾಯಿತು. ಅದಕ್ಕಂತೇ ಇನ್ನೊಂದು ರಟ್ಟಿನ ಪೆಟ್ಟಿಗೆಯನ್ನು ಅಡುಗೆ ಮನೆ ಬಾಲ್ಕನಿಯ ಮುನಿಯಾ ಗೂಡಿನ ಮೇಲೆ ಜೋಡಿಸಿದೆನು. 4-5ದಿನ ಕಾವು ಕೊಟ್ಟ ರಾಬಿನ್, ಒಮ್ಮಿಂದೊಮ್ಮೆ ಕಾಣೆಯಾಯಿತು. ಗೂಡನ್ನು ಇಣುಕಿ ನೋಡಿದರೆ ಮೊಟ್ಟೆ ಹಾಗೆಯೇ ಇದ್ದವು…ಏನಾಯಿತಪ್ಪಾ!?ಯಾಕೆ ಬಿಟ್ಟು ಹೋಯಿತು…!? ಮಾರನೇ ದಿನ ರಾಬಿನ್ ಜೋಡಿಗಳು ಮುನಿಯಾ ಗೂಡಿನ ಮೇಲಿನ“ಗೂಡು ಪೆಟ್ಟಿಗೆ”ಯನ್ನು ಆಕ್ರಮಿಸಿತು…ಗೂಡು ಕಟ್ಟಲೂ ಶುರು ಮಾಡಿತು.!!..ಮುನಿಯಾ ಕೆಳಗಿನ ಮಹಡಿ…!! ರಾಬಿನ್ ಮೇಲಿನ ಮಹಡಿ!…ಸಹಬಾಳ್ವೆಯನ್ನು ನೋಡಲು ನಮಗೆ ಕತೂಹಲ…ಆಶ್ಚರ್ಯ!…ಸಂತೋಷ ಕೂಡ…!! ಮುನಿಯಾ ಆವಾಗಲೇ ಮೊಟ್ಟೆಯಿಟ್ಟಾಗಿತ್ತು. ರಾಬಿನ್ ದಂಪತಿಗಳಿಗೆ ಗೂಡುಕಟ್ಟುವ ತರಾತುರಿ!!!…ಶಾಂತತೆ ಬೇಕಾಗಿದ್ದ ಮುನಿಯಕ್ಕೆ ಮೇಲ್ಮಹಡಿಯಲ್ಲಿ ಯಾವಾಗಲೂ ಗಲಾಟೆ,,ಶಬ್ದ. ಹೊಸತಾಗಿ ಕಟ್ಟಿದ ಅಪಾರ್ಟಮೆಂಟಲ್ಲಿ ವಾಸಿಸಲು ಶುರು ಮಾಡಿದಾಗ ನಮಗಾದ ಅನುಭವವೂ ಇದೇ. ಮೇಲಿನ ಮಹಡಿಗಳಲ್ಲಿ ಕೆಲಸ ಮುಗಿಯದ ಕಾರಣ ನಿತ್ಯವೂ ಶಬ್ದ..ಗಲಾಟೆ. ರಾತ್ರಿ ಪಾಳಿ ಮಾಡಿ ಮಲಗಿದಾಗ ನಿತ್ಯವೂ ನಿದ್ರಾಭಂಗವಾಗುತಿತ್ತು. ಇಲ್ಲಿ ಮುನಿಯಾ ಅಡಚಣೆಗಳನ್ನು ಸಹಿಸಿ ವಾಸಿಸಿರುವುದು ನೋಡಿ ಖುಶಿಯಾಗುತಿತ್ತು. 4-5ದಿನಗಳ ನಂತರ ಮುನಿಯಾಗಳು ರಾಬಿನ್ ಹಕ್ಕಿಯ ಗೌಜಿಗೆ ಹೆದರಿ ಓಡಿಯೇ ಹೊದವು!..ಪಾಪ ಮುನಿಯಾ…ಒಂದು ಇನ್ನೊಂದರ ವೈರಿಯಲ್ಲದಿದ್ದರೂ ಅತೀ ಸನಿಹದ ವಾಸ ದುಸ್ತರವೆನಿಸಿರಬೇಕು. ಪ್ರಕೃತಿ ನಿಯಮ…ನಾವೇನು ಮಾಡುವುದು?…ರಾಬಿನ್ ಸಂಸಾರವಾದರೂ ನೆಮ್ಮದಿಯಿಂದಿರಲಿ ಎಂದು ಆಶಿಸಿದೆವು. 10-12ದಿನಗಳಲ್ಲಿ ಗೂಡು ರೆಡಿ!!….
DSC03126
ಬೆಡ್‍ರೂಮ್ ಬಾಲ್ಕನಿಯಲ್ಲಿ ಅರ್ಧಕ್ಕೇ ಬಿಟ್ಟು ಹೋದ ಗೂಡನ್ನು ಒಂದು ವಾರದ ನಂತರ ತೆಗೆದು ನೋಡಿದೆವು. ಗೂಡು ತುಂಬಾ ಇರುವೆಗಳು.!!..ನಾಲ್ಕು ಮೊಟ್ಟೆಗಳಲ್ಲಿ ಒಂದನ್ನು ಇರುವೆಗಳು ಸಂಪೂರ್ಣ ಖಾಲಿ ಮಾಡಿದ್ದವು!! ಬೇರೆ ಮೊಟ್ಟೆಗಳನ್ನು ಮುತ್ತಿಕೊಂಡು ತಿನ್ನುತ್ತಿದ್ದವು…ಪೆಟ್ಟಿಗೆ ಬಿಚ್ಚಿ ಗೂಡು ಕಟ್ಟಿದ ವೈಖರಿಯನ್ನು ನೋಡಿದರೆ ಆಶರ್ಯವಾಯಿತು!! ಪಾಚಿ ಮುಂತಾದ ಜೌಗು ಪ್ರದೇಶದ ಸಸ್ಯಗಳನ್ನು ಪೆಟ್ಟಿಗೆಯ ಮೂಲೆ-ಮೂಲೆಯಲ್ಲಿ ಇಟ್ಟಿತ್ತು…ಹಕ್ಕಿಗಳ ವಿಸರ್ಜನೆಯಿಂದಲೋ ಏನೋ, ಪಾಚಿ ಪೆಟ್ಟಿಗೆಗೆ ಗಟ್ಟಿಯಾಗಿ ಅಂಟಿಕೊಂಡಿತ್ತು!!. ಮಳೆಗಾಲದಲ್ಲಿ ಗೂಡನ್ನು ನೀರಿನಿಂದ ಸುರಕ್ಷಿತವಾಗಿಡುವ ವಿನ್ಯಾಸವಿರಬೇಕು!! ಚಿಕ್ಕ ಕಡ್ಡಿಗಳನ್ನು ಸುತ್ತಲೂ ಜೋಡಿಸಿ ಮಧ್ಯ ಗುಂಡಿಯಾಗಿರುವ ಗೂಡನ್ನು ರಚಿಸಿತ್ತು…ನೋಡಲು ಅಷ್ಟೇನೂ ಸುಂದರವಾಗಿಲ್ಲದಿದ್ದರೂ ಮರಿಗಳ ಬೆಳವಣಿಗೆಗೆ ಸೂಕ್ತವಾಗಿ ಸುರಕ್ಷಿತವಾಗಿತ್ತು…
IMG_8173red
DSC04186_-_Copy
ಹದಿನೈದು ದಿನಗಳ ರಜೆಯಿಂದ ವಾಪಾಸು ಬಂದಾಗ ರಾಬಿನ್ ಮರಿಯಾಗಿದ್ದವು!! ರಾಬಿನ್ ದಂಪತಿಗಳು ಮರಿಗಳ ಹೊಟ್ಟೆಯನ್ನು ತುಂಬಿಸಲು ಸಂಪೂರ್ಣ ಪ್ರಯತ್ನ ಮಾಡುತ್ತಿದ್ದವು…! ಗೂಡುನ್ನು ಹೆಣ್ಣು ಹಕ್ಕಿ ಮಾತ್ರ ಕಟ್ಟಿದ್ದರೂ, ಮರಿಗಳನ್ನು ಸಾಕುವ ಜವಾಬ್ದಾರಿ ಎರಡೂ ಹಕ್ಕಿಗಳು ಸೇರಿ ನಿಭಾಯಿಸುತ್ತಿದ್ದವು.!.. ಪ್ರತೀ 5-10 ನಿಮಿಷಕ್ಕೊಮ್ಮೆ ಎರಡೂ ಹಕ್ಕಿಗಳು ಹುಳ-ಹುಪ್ಪಟೆ, ಕೀಟ, ಹಾತೆ ಇತ್ಯಾದಿ ಆಹಾರ ಸಾಮಗ್ರಿಗಳನ್ನು ತಂದು ಮರಿಗಳ ಬಾಯಿಗೆ ತುರುಕುತ್ತಿದ್ದವು. ಗಂಡು ಹಕ್ಕಿ ಸಾಮಾನ್ಯವಾಗಿ ಕಂಬಳಿ ಹುಳ (caterpillar)ಗಳನ್ನು ಹೆಚ್ಚಾಗಿ ತರುತ್ತಿದ್ದರೆ, ಹೆಣ್ಣು ಹಕ್ಕಿ ನೊಣ,ಜೇಡ, ಹಾತೆಗಳನ್ನು ಹೆಚ್ಚಾಗಿ ಹಿಡಿದು ತರುತ್ತಿತ್ತು…ಇಷ್ಟು ಹುಳಗಳನ್ನು ಅಲ್ಪ ಸಮಯದಲ್ಲಿ ತರುವುದು ಆಶ್ಚರ್ಯವಲ್ಲವೇ?!! ಬೀಜ ಕಾಳುಗಳನ್ನು ತಿನ್ನುವ ಹಕ್ಕಿಗಳಾದರೂ ಬೆಳೆದ ಗದ್ದೆಯನ್ನೊ, ಶೇಖರಿಸಿದ ಜಾಗವನ್ನು ಗುರುತಿಸಿ ತರಬಹುದು…ಇಲ್ಲಿ ಜೀವಂತ ಕೀಟಗಳನ್ನು ಹುಡುಕಿ,ಹಿಡಿದು ತರಬೇಕು…ನಮಗೆ ಕಷ್ಟಕರವೆನಿಸಿದರೂ ಈ ಹಕ್ಕಿಗಳಿಗೆ ಇದು ಕರತಲಾಮಲಕ….ದಿನವೊಂದಕ್ಕೆ ನೂರಾರು ಹುಳ/ಕೀಟಗಳನ್ನು ಹಿಡಿಯುವ ಈ ಹಕ್ಕಿಗಳು, ಕೃಷಿಕರಿಗೆ ಮಾಡುವ ಉಪಕಾರ ಅಷ್ಟಿಟ್ಟಲ್ಲ….ಜೋಡಿ ಹಕ್ಕಿಗಳ ಶ್ರಮ ಅತೀವವಾಗಿದ್ದರೂ ಅವುಗಳಗೆ ಅದೇ ಖುಷಿ,ಸಂಭ್ರಮ!! ಆಹಾರ ತರುವಾಗಲೂ ಹೆದರುಪುಕ್ಕಲು ಗಂಡು ಹಕ್ಕಿ ಅಡುಗೆ ಮನೆಗೆ ಹೋದರೆ ಸಾಕು,ಪುರ್ರ್‍ರ್ರ್ ಎಂದು ಹಾರಿ ಹೋಗುತಿತ್ತು. ಮರಿಗಳು ದೊಡ್ಡದಾದಂತೆ ಅವುಗಳ ಕೂಗೂ ಸಹ ಜಾಸ್ತಿಯಾಗತೊಡಗಿತು. ಅಪ್ಪ-ಅಮ್ಮ ಬರುವಾಗ ಕಾದು ಕೂತು ಕೂಗಿ-ಕೂಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. “ಅಳುವ ಮಗುವಿಗೆ ಅಧಿಕ ಹಾಲು” ಎನ್ನುವಂತೆ ಈ ಮರಿಗಳಿಗೆ ಕೂಗೇ ಹೊಟ್ಟೆ ತುಂಬಿಸಿಕೊಳ್ಳವ ಸಾಧನ! 10-12 ದಿನಗಳ ಕಳೆದ ಮೇಲೆ ಗೂಡಿನಲ್ಲಿ ರೆಕ್ಕೆ ಬಡಿಯುವ ಶಬ್ದ ಕೇಳಿಸುತಿತ್ತು. ಗೂಡಿನ ಬಾಗಿಲಿಗೆ ಬಂದು ಪೋಷಕರಿಗಾಗಿ ಕಾಯುತ್ತಿದ್ದವು.
ಅದೊಂದು ದಿನ ಹೀಗೆ ಮರಿ ಹಕ್ಕಿಗಳು ಕೂತಿರುವಾಗ ಅಕಸ್ಮಾತ್ ಆಗಿ ಬಾಲ್ಕನಿ ಬಾಗಿಲು ತೆರೆದು ಬಿಟ್ಟೆ.. ಒಂದು ಮರಿ ಗಾಬರಿಗೊಂಡು ಹಾರಿ ಹೊರಗೆ ಬಂದಿತು. ಸರಿಯಾಗಿ ಹಾರಲಾಗದ ಮರಿಯು ಗಾಬರಿಯಿಂದ ಒಮ್ಮೆ ಬಾಲ್ಕನಿಯ ಗ್ರಿಲ್ ಮೇಲೆ, ಮತ್ತೊಮ್ಮೆ ಕಿಟಕಿಯ ಮೇಲೆ ಕೂರುತ್ತಾ ಚಡಪಡಿಸುತಿತ್ತು…ಈ ಮರಿ ಹಕ್ಕಿಯ ಭಯವೊ,ತವಕವೊ, ಹುಚ್ಚು ಧೈರ್ಯವೊ?… ಅಂತೂ ಸಂಕಟಕ್ಕೆ ಸಿಲುಕಿತು. ಸ್ವಲ್ಪದರಲ್ಲೇ ಒಂಟಿ ಮರಿಯ ತೊಳಲಾಟ ಕಂಡ ಇನ್ನೆರಡೂ ಹಕ್ಕಿಗಳು ಹುಚ್ಚು ಧೈರ್ಯ ಮಾಡಿ ಗೂಡಿನಿಂದ ಹೊರ ಬಂದು ಅವುಗಳೂ ಪೇಚಾಡಲು ಶುರು ಮಾಡಿದವು. ಇದನ್ನು ನೋಡಿ ನಮಗೆ ತುಂಬಾ ದುಃಖವಾಯಿತು. ಛೆ! ನಾನೇನು ಮಾಡಿದೆ? ಎಂದು ಪಶ್ಚಾತ್ತಾಪವಾಯಿತು. ನಿಶ್ಚಿಂತೆಯಿಂದಿದ್ದ ಮರಿಗಳನ್ನು ಏಳಿಸಿದೆನಲ್ಲಾ…ಅಷ್ಟೊತ್ತಿಗೆ ತಾಯಿ ಹಕ್ಕಿಯ ಆಗಮನ. ಚೀಕರಿಸುತ್ತಿದ್ದ ಮರಿಗಳ ಪಾಡನ್ನು ನೋಡಿ ಗಾಬರಿಗೊಂಡಿತು. ಒಂದೆರಡು ಬಾರಿ ಗೂಡಿಗೆ ಹಾರಿ ಮರಿಗಳನ್ನು ಗೂಡು ಸೇರಲು ಪ್ರೇರೇಪಿಸಿತು. ಗಾಬರಿ ಮತ್ತು ಯದ್ವಾತದ್ವ ಹಾರಾಟದಿಂದ ಬಳಲಿದ ಮರಿಗಳು ಗೂಡು ಸೇರಲು ಅಶಕ್ತರಾಗಿದ್ದವು. ತಾಯಿ ಹಕ್ಕಿ ಬಾಲ್ಕನಿಯ ಕಿಟಕಿಯ ಮೇಲೆ ಆಹಾರ ಕೊಟ್ಟು ಹಾರಿ ಹೋಯಿತು. ಗಂಡು ಹಕ್ಕಿಯೂ ಬಂದು ಆಹಾರ ಕೊಟ್ಟು ಹೋಯಿತು. ಪೋಷಕ ಹಕ್ಕಿಗಳಿಂದ ಆಹಾರ ತಿಂದ ಮರಿಗಳು ಸ್ವಲ್ಪ ಸುಧಾರಿಸಿದವು. ಸ್ವಲ್ಪ ಧೈರ್ಯವೂ ಬಂದಿರಬೇಕು. ಆದರೆ ಅದು ಅತೀ ಕ್ಷಣಿಕವಾಗಿತ್ತು. ಎಲ್ಲಿತ್ತೊ ಏನೋ, ಕಾಗೆಯೊಂದು ಬಂದ ಬಾಲ್ಕನಿಯಲ್ಲಿ ಪ್ರತ್ಯಕ್ಷವಾಯಿತು. ಎಲ್ಲೋ ಹಾರುತ್ತಿದ್ದ ಕಾಗೆಯ ಕಣ್ಣಿಗೆ ಈ ಅಶಕ್ತ ಮರಿಗಳು ಕಾಣಿಸಿಯೇ ಬಿಟ್ಟವು. “ಬಾಣಲೆಯಿಂದ ತಪ್ಪಿ ಒಲೆಗೇ ಬಿದ್ದಂತಾಯಿತು”. ಕೂಡಲೇ ಕಾಗೆಯನ್ನು ಓಡಿಸಿದೆವು. ಅದೇನು ಪ್ರಕೃತಿ ನಿಯಮ?! ಆಹಾರ ಸರಪಣಿಯ ನಾಲ್ಕನೇ ಕೊಂಡಿಯಾಗಿ ಕಾಗೆ ಪ್ರಕಟವಾಗಿತ್ತು! ಶಾಂತವಾಗಿ ನೆಮ್ಮದಿಯಿಂದ ಗೂಡಲ್ಲಿ ಕೂತಿದ್ದ ಈ ಮರಿಗಳಿಗೆ ನೋಡು-ನೋಡುತ್ತಲೇ ಸಾವು-ಬದುಕಿನ ಹೋರಾಟ!!. ನಮ್ಮಿಬ್ಬರಿಗೂ ಸಹ ಗಾಬರಿ-ದುಃಖ. ನನಗೆ ಇದೆಲ್ಲಾ ನನ್ನಿಂದಲೇ ಆಯಿತಲ್ಲಾ ಎಂಬ ಪಶ್ಚಾತ್ತಾಪ. ಛೆ! ಈ ರಾಬಿನ್ ದಂಪತಿಗಳಿಗೆ ಸಂತಾನೊತ್ಪತ್ತಿಗೆ ಎಷ್ಟು ಕಂಟಕವಪ್ಪಾ..?! ಮೊದಲ ಗೂಡಲ್ಲಿ ಮರಿಯಾಗುವ ಮೊದಲೇ ಇರುವೆ ಹಾವಳಿ..ಈಗ ಮರಿಗಳನ್ನು ಉಳಿಸಿಕೊಳ್ಳವುದು ಕಷ್ಟಕರವೇ ಸರಿ. ಹೀಗೆ ಪೋಷಕ ಹಕ್ಕಿಗಳು ಆಹಾರ ತಂದು ಕೊಡುತ್ತಿದ್ದವು. ನಮಗೆ ಕಾದು ಕೂತು ಕಾಗೆಗಳನ್ನು ಓಡಿಸುವ ಕೆಲಸ..! ಮರಿಗಳಂತೂ ಕಾಗೆಗೆ ಹೆದರಿಕೊಂಡು ಬಾಲ್ಕನಿಯಲ್ಲಿಟ್ಟ ಹೂಕುಂಡಗಳ ಸಂಧಿನಲ್ಲಿ ಅಡಗಿ ಕುಳಿತ್ತಿದ್ದವು. ಸಂಜೆಯ ಹೊತ್ತಿಗೆ ಸ್ವಲ್ಪ ಸುಧಾರಿಸಿಕೊಂಡು ಆಗೊಮ್ಮೆ ಈಗೊಮ್ಮೆ ಗ್ರಿಲ್ ಮೇಲೆ ಕೂರತ್ತಿದ್ದವು. ಸಂಜೆ 5 ಗಂಟೆಯ ಸುಮಾರಿಗೆ ಮೂರೂ ಮರಿ ಹಕ್ಕಿಗಳನ್ನು ಪೋಷಕ ಹಕ್ಕಿಗಳು ಕಾಡಿಗೆ ಕರೆದ್ಯೊದವು. ಅಧ್ಯಾಯ ಸುಖಾಂತ್ಯವೇ?ನಮಗಂತೂ ಸಮಾಧಾನವಾಯಿತು. ನೂರಕ್ಕೆ ನೂರಲ್ಲದಿದ್ದರೂ ಮರಿಗಳು ಬದುಕುಳಿಯುವ ಸಾಧ್ಯತೆಯೇ ಜಾಸ್ತಿಯನಿಸಿತು…
ಮುನಿಯಾ ಮತ್ತು ರಾಬಿನ್’ಗಳ ಎರಡೂ ಗೂಡನ್ನು ತೆಗೆದು ಸ್ವಚ್ಛಗೊಳಿಸಿ ಮತ್ತೆ ಜೋಡಿಸಿದೆನು. ಸುಮಾರು 20 ದಿನಗಳ ಬಳಿಕ ಪುನಃ ರಾಬಿನ್ ಹಕ್ಕಿಗಳು ಗೂಡು ಕಟ್ಟಲು ಶುರು ಮಾಡಿದವು. ಅಂದರೆ ಹಿಂದಿನ ಕಹಿ ನೆನಪುಗಳಾಗ್ಯೂ ಸಫಲತೆ ತೃಪ್ತಿ ತಂದಿರಬೇಕು. ಕಾಡಿಗೆ ಹೋಲಿಸಿದರೆ ಮನುಷ್ಯರ ಒಡನಾಟದಲ್ಲಿ ಗೂಡು ಕಟ್ಟುವುದು ಸುರಕ್ಷಿತವೆನಿಸಿರಬೇಕು. ಮೊದಲಿನಂತೆಯೇ ಗೂಡು ಕಟ್ಟಿ ಮೊಟ್ಟೆಯಿಟ್ಟು ನಾಲ್ಕು ಮರಿಗಳನ್ನು ಬೆಳೆಸಿದವು. ತದನಂತರ ಕಳೆದ ಒಂದು ವರ್ಷದಲ್ಲಿ ಮುನಿಯಾ ಮಾತ್ರ ಸಂಸಾರ ಮಾಡುತ್ತಿದೆ. ರಾಬಿನ್ ಗೂಡ ಕಟ್ಟಲಿಲ್ಲ.
ಈ ಹಕ್ಕಿಗಳು ಕಾಡಲ್ಲಿ ಗೂಡು ಕಟ್ಟಿ ಮರಿಗಳನ್ನು ಬೆಳೆಸುತ್ತವೆ. ಕಾಡಿನಲ್ಲಿ ಇವುಗಳ ಗೂಡು ಕಟ್ಟುವ ಮತ್ತು ಮರಿ ಮಾಡುವ ವೈಖರಿಯನ್ನು ನೋಡುವುದು ಅಸಾಧ್ಯ. ಅಲ್ಲದೇ ಅದು ಹಕ್ಕಿಗಳಿಗೆ ಅಡಚಣೆಯೇ ಆಗುತ್ತದೆ. ಆದರೆ ಈ ಹಕ್ಕಿಗಳು ನಮ್ಮ ಬಾಲ್ಕನಿಯಲ್ಲಿ ಗೂಡು ಕಟ್ಟಿ, ಗೂಡು ಕಟ್ಟುವ ಕಾರ್ಯವೈಖರಿ, ಮರಿಗಳ ಬಗ್ಗೆ ಕಾಳಜಿ ಮತ್ತು ಮರಿಗಳನ್ನು ಬೆಳೆಸುವ ರೀತಿಯನ್ನು ತಿಳಿಸಿ ಕೊಟ್ಟವು. ಅದಲ್ಲದೇ ನಿತ್ಯವೂ ಮಧುರವಾಗಿ ಹಾಡುತ್ತಾ ನಮ್ಮನ್ನು ಮನರಂಜಿಸುತಿದ್ದವು.

ಒರಿಯಂಟಲ್ ಮ್ಯಾಗ್‍ಪೈ ರಾಬಿನ್ ಸುಮಾರು 19ಸೆ.ಮೀ ಉದ್ದವಿರುವ ಕಪ್ಪು-ಬಿಳಿ ಬಣ್ಣದ ಪಕ್ಷಿ. ಯಾವಾಗಲೂ ಬಾಲವನ್ನು ಮೇಲಕ್ಕೆತ್ತಿರುವುದು ಇದರ ಸ್ವಭಾವ!. ಗಂಡು ಹಕ್ಕಿ ಖಡಕ್ ಕಪ್ಪು ಬಣ್ಣದ್ದಾಗಿದ್ದರೆ, ಹೆಣ್ಣು ಹಕ್ಕಿ ಸ್ವಲ್ಪ ಬೂದು ಮಿಶ್ರಿತ ಬಣ್ಣದ್ದಾಗಿರುತ್ತದೆ. ಭಾರತದಲ್ಲಿ ಮಾರ್ಚನಿಂದ ಜುಲೈವರೆಗೆ ಮರಿ ಮಾಡುವ ಈ ಹಕ್ಕಿಯು ಮರದ ಪೊಟರೆ, ಮನೆ-ಮಾಡುಗಳ ಸಂಧಿನಲ್ಲಿ ಗೂಡು ಕಟ್ಟುತ್ತದೆ. ಮನುಷ್ಯರ ಒಡನಾಟದಲ್ಲಿ ಹೆಚ್ಚಾಗಿ ಕಾಣ ಸಿಗುವ ರಾಬಿನ್, “ಗೂಡು ಪೆಟ್ಟಿಗೆ”ಯನ್ನು ಗೂಡು ಕಟ್ಟಲು ಆರಿಕೊಳ್ಳುವುದು ಸಾಮಾನ್ಯ. ಗೂಡು ಕಟ್ಟುವ ಕೆಲಸದಲ್ಲಿ ಹೆಣ್ಣು ಜಾಸ್ತಿ ತೊಡಗಿಸಿಕೊಂಡರೆ,ಗಂಡು ಗೂಡಿನ ರಕ್ಷಣಾ ಕಾರ್ಯ ನೋಡಿಕೊಳ್ಳುತ್ತದೆ. ಪ್ರಾಚೀನ ಕಾಲದಲ್ಲಿ ಈ ರಾಬಿನ್ ಹಕ್ಕಿಗಳನ್ನು ಇವುಗಳ ಹಾಡುವ ಸ್ವಭಾವಕ್ಕಾಗಿ ಮನೆಗಳಲ್ಲಿ ಪಂಜರದಲ್ಲಿಟ್ಟು ಸಾಕುತ್ತಿದ್ದರು. ನಮ್ಮಂತೆ ಇವುಗಳೂ ಸ್ವತಂತ್ರವಾಗಿರುವುದು ಉಚಿತವಲ್ಲವೇ?

Thursday, 7 July 2016

ಹೆಸರು....



ಹೆಸರು... 
ಮುದ್ದಾದ ಪ್ರತಿಮೆಯಂತವಳಿಗೆ 
ಹೆತ್ತವರಿಟ್ಟ ಹೆಸರು ಪ್ರತಿಮಾ... 
ಕರೆಯುತ್ತಲೇ ಕಳಚಿಕೊಂಡಿತು --ಮಾ
ಉಳಿದದ್ದು ಬರೀ 'ಪ್ರತಿ'
ಸುಲಭವಾಯಿತು ಕರೆಯಲು ದಿನಂ ಪ್ರತಿ 
ಅವಳಿಯರು ಒಬ್ಬರಿನ್ನೊಬ್ಬರ ಕರೆಯುತ್ತಾರೆ 'ಪ್ರತಿ'
ಹೌದಲ್ಲವೇ ಒಬ್ಬರಿನ್ನೊಬ್ಬರ ನೈಜಪ್ರತಿ
ಅಜ್ಜ-ಅಜ್ಜಿಯರ ನಾಮಕರಣ 'ರಾಧೆ'
ಅದನ್ನು ಮೊಟಕುಗೊಳಿಸಿ ಕರೆದರೂ 'ರಾಧೀ'
ನಾ ಕರೆಯಲೇ ಪ್ರೀತಿಯಿಂದ 'ಪ್ರೀತಿ'
ಹೆಸರಲ್ಲೇನಿದೆ ? ಪ್ರತಿ ಕರೆಯಲ್ಲೂ ಇರಬೇಕು 'ಪ್ರೀತಿ'


Sunday, 22 May 2016

ಗುಬ್ಬಚ್ಚಿ ಗೂಡಿನಲ್ಲಿ.....

ಗುಬ್ಬಚ್ಚಿಗಳು ನಮ್ಮ ಬಾಲ್ಯದ ದಿನಗಳಲ್ಲಿ ಎಲ್ಲಾ ಮನೆಯ ಅವಿಭಾಜ್ಯ ಅಂಗಗಳಾಗಿದ್ದವು.  ಮನೆಗಳಲ್ಲಿ ಗುಬ್ಬಚ್ಚಿಗಳಿಗಾಗಿ ಮುಚ್ಚಿಗೆಯಲ್ಲಿ ಗೂಡುಕಟ್ಟಿ ಇಡಲಾಗುತಿತ್ತು. ಮನೆಕಟ್ಟುವಾಗ ಮನೆಯ ವಿನ್ಯಾಸದೊಂದಿಗೆ ಗುಬ್ಬಚ್ಚಿಗೂಡಿನ ವಿನ್ಯಾಸವೂ ಮುಖ್ಯವಾಗಿತ್ತು. ಮರದ ಬೆಚ್ಚಗಿನ ಮುಚ್ಚಿಗೆಯಲ್ಲಿ ಸುಮಾರು ಅರ್ದ ಮೀಟರ್ ಉದ್ದಗಲದ ಪೊಟರೆಯಿಟ್ಟು, ಹೊರಗಡೆ ಸುಮಾರು ೫ ಸೆಂಟೀಮೀಟರ್ ನ ರಂದ್ರಯಿಡಲಾಗುತಿತ್ತು. ಹೀಗೆ ವಿನ್ಯಾಸಗೊಳಿಸಿದ ಗೂಡು ಬೆಕ್ಕು, ಹಾವು, ಇರುವೆ ಇತ್ಯಾದಿಗಳಿಂದ ಸುರಕ್ಷಿತವಾಗಿತ್ತು. ಕೇರೆ ಹಾವುಗಳು ಮಾಡಿನ ಪಕ್ಕಾಸಿನ ಮೇಲಿಂದ ಬಂದು ಅರ್ದ ಮೀಟರ್ ನಷ್ಟು ದೂರ ದೇಹವನ್ನು ಚಾಚಿ ವಿಫಲ ಪ್ರಯತ್ನಮಾಡಿದ್ದನ್ನು ಹಲವು ಬಾರಿ ನೋಡಿದ್ದೆವು. ಗುಬ್ಬಚ್ಚಿಗಳು ಸಂಖ್ಯೆ ಜಾಸ್ತಿಯಾದಾಗ ಈ ವಿನ್ಯಾಸಗೊಳಿಸಿದ ಗೂಡಲ್ಲದೆ ಮಾಡಿನ ಸಂದಿಮೂಲೆಗಳಲ್ಲೂ ಗೂಡುಕಟ್ಟಿ ಮನೆತುಂಬಾ ಗುಬ್ಬಚ್ಚಿಗಳಿರುತ್ತಿದ್ದವು. ಆದರೆ ನಮೆಗೆಲ್ಲಾ ಹಕ್ಕಿಗಳ ಹಿಕ್ಕೆಯ ತೊಂದರೆಯೇ ತಲೆ ನೋವಾಗಿತ್ತು. ಒಗೆದು ಒಣಸಿದ ಯುನಿಫ್ಹಾರ್ಮನ ಬಿಳಿ ಬಟ್ಟೆಗಳನ್ನು ಹಿಕ್ಕೆಹಾಕಿ ಗಲೀಜುಮಾಡುತ್ತಿದ್ದ ಗುಬ್ಬಚ್ಚಿಗಳಿಗೆ ದಿನವೂ ಬಯ್ಯುತ್ತಿದೆವು. ಯಾಕಾದ್ರೂ ಗುಬ್ಬಚ್ಚಿಗಳನ್ನು ಮನೆಯಲ್ಲಿ ಸಾಕುತ್ತಾರೆ ಅನಿಸುತ್ತಿತ್ತು. ಗುಬ್ಬಚ್ಚಿಗಳಿಂದ ಉಪಯೋಗವೇನು ಎನ್ನುವುದೇ ತಿಳಿಯುತ್ತಿರಲ್ಲಿಲ್ಲ. ಪರಿಸರ ಶಾಸ್ತ್ರದಲ್ಲಿ ಪರಿಸರದ ಸಮತೋಲನಕ್ಕೆ ಎಲ್ಲಾ ಜೀವಿಗಳು ಬೇಕು ಎಂದು ಪಾಠದಲ್ಲಿ ಓದಿದರೂ, ಪೂರ್ವಜರ ಮನೆಯಲ್ಲಿ ಗುಬ್ಬಚ್ಚಿ ಸಾಕುವ ಕಾರಣ ತಿಳಿಯಲಿಲ್ಲ. ಸ್ಕೂಲು-ಕಾಲೇಜು ಮುಗಿತ್ತಿದ್ದಂತೆ ಗುಬ್ಬಚ್ಚಿಗಳು ಕಣ್ಮರೆಯಾದವು. ನಮ್ಮ ಮನೆಯಲೊಂದೇ ಅಲ್ಲ, ಎಲ್ಲ ಕಡೆಯೂ ಗುಬ್ಬಚ್ಚಿಗಳ ಸಂತತಿ ಕ್ಷಿಪ್ರಗತಿಯಲ್ಲಿ ಕಡಿಮೆಯಾಗ ತೊಡಗಿತು.
ಹೀಗಿರುವಾಗ ನಮ್ಮ ಕೈಗಾ ವಸತಿ ಸಂಕೀರ್ಣದಲ್ಲಿ ಗುಬ್ಬಚ್ಚಿಗಳನ್ನು ನೋಡಿದಾಗ ತುಂಬಾ ಖುಶಿಯಾಯಿತು. ಬಹುಮಹಡಿ ಕಟ್ಟಡದ ನಿರ್ಮಾಣದಲ್ಲಿದ ನ್ಯೂನ್ಯತೆಯಿಂದಾಗಿರುವ ಕುಂದಗಳ ಮದ್ಯೆಯಿರುವ ಪೊಟರೆ ಗುಬ್ಬಚ್ಚಿಗಳ ಗೂಡಾಗಿತ್ತು. ಅಪರೂಪಕ್ಕೆ ಕಾಣಸಿಗುವ ಗುಬ್ಬಚ್ಚಿಗಳ ಬಗ್ಗೆ ಇನ್ನೂ ತಿಳಿದುಕೊಳ್ಳುವ ಆಸಕ್ತಿಬಂದಿತು. ಬಾಲ್ಕನಿಯಲ್ಲಿ ಅಕ್ಕಿ ಹಾಗೂ ನೀರನ್ನು ಇಡಲು  ಶುರುಮಾಡಿದೆನು. ಹಾಗೇ ರಟ್ಟಿನ ಪೆಟ್ಟಿಗೆಯನ್ನು   ಬಾಲ್ಕನಿಯಲ್ಲಿ "ಗೂಡು ಪೆಟ್ಟಿಗೆ" (NEST BOX) ಯಾಗಿ ಅಳವಡಿಸಿದೆ. ಆ ಪೆಟ್ಟಿಗೆಗಳಲ್ಲಿ ಮುನಿಯಾ ಜಾತಿಯ ಚಿಕ್ಕ ಹಕ್ಕಿ ಗೂಡು ಕಟ್ಟಿ ಸಂಸಾರಮಡಲು ಸುರುಮಾಡಿದವು. ಮುನಿಯಾಗಳು ಪ್ರತಿ ೨ ತಿಂಗಳಿಗೊಮ್ಮೆ ಮರಿಮಾಡಿತ್ತಿವೆ. ಇಟ್ಟ ಗೂಡುಪೆಟ್ಟಿಗೆಯಲ್ಲಿ ಗುಬ್ಬಚ್ಚಿ ಬರಲಿಲ್ಲವೆಂದು ಬೇಸರವಾಗುತಿತ್ತು. ೩ ವರ್ಷವಾದ ನಂತರ ಗುಬ್ಬಚ್ಚಿ ಗೂಡುಪೆಟ್ಟಿಗೆಯನ್ನು ಗೂಡುಕಟ್ಟಲು ಆರಿಸಿಕೊಂಡವು.



ಗೂಡುಪೆಟ್ಟಿಗೆಯನ್ನು "ಗೂಡುಕಟ್ಟಲು ಯೋಗ್ಯವೇ?" ಎಂದು ಪರೀಕ್ಷಿಸಲು ಜೋಡಿ ಹಕ್ಕಿಗಳು ಸುಮಾರು ೧೫ ದಿನ ತೆಗೆದುಕೊಂಡವು. ಗಂಡು ಮತ್ತು ಹೆಣ್ಣು ಗುಬ್ಬಚ್ಚಿಗಳು ಸಕ್ರಿಯವಾಗಿ ತೊಡಗಿಕೊಂಡಿದ್ದವು... ಮೊದಲಿದ್ದ ಮುನಿಯಾ ಹಕ್ಕಿಗಳು ಹಾರಿ ಹೋದದಿನವೇ  ಗುಬ್ಬಚ್ಚಿಗಳು ಆ ಗೂಡನ್ನು ಸಮೀಕ್ಷಿಸಲು ಲು ಸುರುಮಾಡಿದವು. ಮೊದಲು ಗಂಡು ಗುಬ್ಬಿ ಗೂಡನ್ನು ಪರಿಚಯಿಸಿದರೆ, ಹೆಣ್ಣುಗುಬ್ಬಿಯದು ಕೂಲಂಕುಷ ವೀಕ್ಷಣೆ...!! ಗ್ರಿಲ್ ನಿಂದ ಗೂಡಿಗೆ ಮತ್ತೆ ಗ್ರಿಲ್ಲಿಗೆ... ಹೀಗೆ ಹತ್ತಾರು ಬಾರಿ ಗೂಡಿಗೆ ಹೋಗಿ ಪರೀಕ್ಷಿಸಿತು. ೨-೩ ದಿನಗಳಲ್ಲಿ  'ಗೂಡಿಗೆ ಬೇರೆಯೇನು ಅಪಾಯವಿಲ್ಲ' ಎಂದು ತೀರ್ಮಾನಿಸಿದ ಹೆಣ್ಣುಗುಬ್ಬಿ ಗೂಡಿನ ಒಳಹೊಕ್ಕಿ ವಾಸ್ತವ್ಯಕ್ಕೆ ಯೋಗ್ಯವೇ ಎಂದು ಪರೀಕ್ಷಿಸಲು ಸುರುಮಾಡಿತು. ಈ ಮಧ್ಯೆ ಮುನಿಯಾಗಳು ಗುಬ್ಬಿಗಳಿಲ್ಲದ ಸಮಯನೋಡಿ ಪುನಃ ಬಂದು ಸಂಸಾರಮಾಡಲು ಸುರುಮಾಡಿದವು. ಗುಬ್ಬಚ್ಚಿಗಳು ಬಂದಾಕ್ಷಣ ಮುನಿಯಾಗಳು ಹಾರಿಹೊದರೂ ಪುನಃ ವಾಪಾಸಾಗುತ್ತಿದ್ದವು. ಅರೆಮನಸ್ಸಿಂದಿದ್ದ ಗುಬ್ಬಚ್ಚಿಗಳು ಮುನಿಯಾಗಳನ್ನು ಅಷ್ಟೇನು ಓಡಿಸುತ್ತಿರಲಿಲ್ಲ... ಗುಬ್ಬಚ್ಚಿಗಳ ವಿಳಂಭ ತೀರ್ಮಾನದ  ಲಾಭಪಡೆದ ಮುನಿಯಾ ಮೊಟ್ಟೆಇಟ್ಟೇಬಿಟ್ಟಿತು.!!! ಗುಬ್ಬಚ್ಚಿ ಕನಿಕರದಿಂದ ಆ ಗೂಡನ್ನು ತೊರೆದು ಬೇರೆ ಗೂಡನ್ನರಸಿ ಹೊರಟಿತು.... ಹಾಗೆಹೊರಟ ಗುಬ್ಬಚ್ಚಿಗಳು ನೇರವಾಗಿ ಹೋಗಿದ್ದು ನಮ್ಮ ಮನೆಯ ಇನ್ನೊಂದು ಬಾಲ್ಕನಿಯಲ್ಲಿದ್ದ 'ಗೂಡುಪೆಟ್ಟಿಗೆ' ಯನ್ನು...!!! ಅಲ್ಲಿಯೂ ಮುನಿಯಾ ಗೂಡು ಕಟ್ಟುತಿತ್ತು....ಗೂಡಿಗಾಗಿ ಮುನಿಯಾ -ಗುಬ್ಬಚ್ಚಿಗಳ ಪೈಪೋಟಿ ಷುರುವಾಯಿತು... ೫-೬ ದಿನ ಮೇಲೆ ವಿವರಿಸಿದಂತೆ ಗಂಡು ಗುಬ್ಬಿಯ ಗೂಡಿನ ಆಯ್ಕೆ ಹಾಗೂ ಹೆಣ್ಣುಗುಬ್ಬಿಯ ಕೂಲಂಕುಷ ಸಮೀಕ್ಷೆ-ಪರೀಕ್ಷೆ ಆಗುತ್ತಿದ್ದಂತೆ ಮುನಿಯಾ ಮೊಟ್ಟೆಯನ್ನೂ ಇಡಲು ಶುರುಮಾಡಿತು.... !!! 'ಇದೇ ಸರಿಯಾದ ಜಾಗ' ಎಂದು ತೀರ್ಮಾನಿಸಿದ ಗುಬ್ಬಚ್ಚಿಗಳು ತಮಗಿಂತ ದುರ್ಬಲವಾದ ಮುನಿಯಾ ಮೇಲೆ ಪ್ರಹಾರವೇ ನಡೆಸಿತು... ಮೊಟ್ಟೆಯಿಡುತ್ತಿದ್ದ ಮುನಿಯಾದ ಮೇಲೆ ಧಾಳಿಮಾಡಿ ಕೊಂದೇಬಿಟ್ಟಿತು....'ಸಾಧು' ಎಂದೇ ಗುರುತಿಸಲ್ಪಟ್ಟ ಗುಬ್ಬಚ್ಚಿಯೇ ತನ್ನ ಉಳಿವಿಗೆ ಈ ಚಿಕ್ಕ ಹಕ್ಕಿಯನ್ನು ಬಲಿಯಾಗಿಸಿತು. ಗೂಡಲ್ಲಿದ್ದ  ಮುನಿಯಾ ಮೊಟ್ಟೆಯನ್ನು ಕೆಳಗುರುಳಿಸಿದವು. ಮತ್ತೆರಡು  ದಿನಗಳಲ್ಲಿ ಗೂಡನ್ನು ತಮಗೆ ಬೇಕಾದಂತೆ ಮಾರ್ಪಾಡಿಸಿದವು.. ಮುನಿಯಾದ ಗೂಡಿಗೆ ಭಿನ್ನವಾಗಿ ಗುಬ್ಬಚ್ಚಿಗಳು  'ಅಜ್ಜರಗಡ್ಡ ', ಹತ್ತಿ, ತುಪ್ಪಳದ ಗರಿ ಇತ್ಯಾದಿಗಳನ್ನು ತಂದು ಗೂಡನ್ನು ಮೆತ್ತಗಿನ ಹಾಸಿಗೆಯಂತೆ ತಯಾರಿಸಿದವು. ಗೂಡಿನ ಒಳಾಂಗಣ ವಿನ್ಯಾಸದಲ್ಲಿ ಶ್ರೀಮತಿ ಗುಬ್ಬಚ್ಚಿದೇ ಮೇಲುಕೈ !!!!ಗೂಡಿನ ಸಾಮಗ್ರಿಗಳನ್ನು ಗಂಡು ಗುಬ್ಬಿ ತರುತ್ತಿದ್ದರೂ ಗೂಡಿನೊಳಗೆ ಜೋಡಿಸುವ ಕೆಲಸ ಮಾತ್ರ ಹೆಣ್ಣು ಗುಬ್ಬಚ್ಚಿಯದೇ!!!. ಸೌಂದರ್ಯ ಪ್ರಜ್ಞೆಯಲ್ಲಿ ಮುನಿಯಾವೇ ಮುಂದೆ. ಮುನಿಯಾದ ಗೂಡುಹೊರಗಿನಿಂದ ಕಾಣಲು ಚೊಕ್ಕವಾಗಿದ್ದರೆ, ಗುಬ್ಬಚ್ಚಿಯ ಗೂಡಿನ ಹೊರೆಗೆಲ್ಲಾ ಹುಲ್ಲು-ಕಡ್ಡಿಗಳು ನೇತಾಡುತಿತ್ತು.!!! ಸರಿ, ಗೂಡು ರೆಡಿಯಾಯಿತು. ಮುಂದೆ ಮಿಲನಮಹೊತ್ಸವ....!!! ಪ್ರೀತಿಯಿಂದ ಕರೆದು, ಭುಜವನ್ನು ಹಿಗ್ಗಿಸಿ ತನ್ನ ಪರಾಕ್ರಮಗಳನ್ನು ಪ್ರದರ್ಶಿಸುತಿದ್ದ ಗಂಡುಗುಬ್ಬಿಯನ್ನು ಸತಾಯಿಸಿದ ಹೆಣ್ಣುಗುಬ್ಬಿ, ಒಂದಿಷ್ಟು ಸರಸವಾಡಿ ಕೊನೆಗೆ ಮಿಲನಕ್ಕೆ ಒಪ್ಪಿಕೊಡಿತು.!!! ಆಶ್ಚರ್ಯವೆಂದರೆ ಗುಬ್ಬಚ್ಚಿಗಳ ಹನಿಮೂನ್ ಹಲವು ದಿನಗಳ ವರೆಗೂ ನಡೆಯುತಿತ್ತು.!!! ರಾತ್ರಿಹೊತ್ತು ಹೆಣ್ಣು ಗುಬ್ಬಚ್ಚಿ ಗೂಡಲ್ಲಿ ಕೂತಿರುತಿತ್ತು... ಸುಮಾರು ೧೫ ದಿನಗಳ ನಂತರ ಬಾಲ್ಕನಿಯಲ್ಲಿ ಹೋದಾಗ ಮರಿಗುಬ್ಬಿಗಳ ಚೀವ್-ಚೀವ್ ಕೂಗಿದಾಗಲೇ ತಿಳಿಯಿತು ಗುಬ್ಬಚ್ಚಿ ಮೊದಲೇ ಮೊಟ್ಟೆ ಇಟ್ಟಾಗಿತ್ತು!!!. ಮುಂದಿನ ಪೀಳಿಗೆಯ ಉದಯವಾಯಿತು.

ಸುಮಾರು ೧೫ ದಿನಗಳ ಬಳಿಕ ಮೊಟ್ಟೆಯೊಡೆದು ಮರಿಯಾಯಿತು. ಹಕ್ಕಿಗಳಿಗೆ ಆಹಾರ ತಿರುವ ಕೆಲಸ....... ಮುನಿಯಾ ೩೦-೪೫ ನಿಮಿಷಕ್ಕೊಮ್ಮೆ ಹಕ್ಕಿಗಳಿಗೆ ಗುಟುಕು ಕೊಡುತ್ತಿದ್ದರೆ, ಗುಬ್ಬಚ್ಚಿಗಳು ೧೦-೧೫ ನಿಮಿಷಕ್ಕೊಮ್ಮೆ ಆಹಾರ ತರುತಿದ್ದವು!!! ನಮಗೆ 'ಏನು ಆಹಾರ' ತರುತಿದೆ ಎಂಬ ಕುತೂಹಲ... ಅವು ತರುತ್ತಿರುವುದು ಕೀಟಗಳನ್ನು. ಅದರಲ್ಲೂ ಮುಖ್ಯವಾಗಿ ಜೇಡಗಳನ್ನು.!!! ನಮ್ಮ ಬಾಲ್ಕನಿಯಲ್ಲಿರುವ ಜೇಡಗಳನ್ನೆಲ್ಲಾ ಹಿಡಿದು ತಿನ್ನಿಸಿದ ಹಕ್ಕಿಗಳು ಸುತ್ತಮುತ್ತಲಿನ ಹಲವಾರು ಮನೆಯ ಬಾಲ್ಕನಿಗಳಿಂದ ಜೇಡ ಹಾಗೂ ಜೇಡದ ಮೊಟ್ಟೆಗಳನ್ನು ತರುತಿದ್ದವು. ಅಗ ನನಗೆನಿಸಿತು - ನಮ್ಮ ಹಿರಿಯರು ಗುಬ್ಬಚ್ಚಿಯನ್ನು ಸಾಕುತ್ತಿದ್ದದ್ದೂ ಇದಕ್ಕಿರಬಹುದೇ?....ಇರಬಹುದು. ಆಗಿನ ಮನೆಗಳು ತೆರದ ಮನೆಗಳಾಗಿರುತ್ತಿದ್ದು, ಹುಳ, ಹಾತೆ, ಕೀಟಗಳು ಮನೆಯೊಳಗೆ ಬರುವುದು ಸಾಮಾನ್ಯವೇ.... ಹಾಗೆ ಬರುತಿದ್ದ ಕೀಟಗಳ ಜೈವಿಕ ನಿಯಂತ್ರಣ ಸಾಧನವೇ ಈ ಗುಬ್ಬಚ್ಚಿಗಳು??
ಅಲ್ಲದೇ ಹಾವು ಮತ್ತಿತ್ತರ ಉಪದ್ರವಿ ಪ್ರಾಣಿಗಳ ಬರುವಿಕೆಯನ್ನು ಕೂಗಿ-ಕೂಗಿ ನಮಗೆ ತಿಳಿಸುತಿದ್ದವು. ಅಂತೂ ನಮ್ಮ ಬಾಲ್ಕನಿಯು ಜೇಡಗಳಿಂದ ಮುಕ್ತವಾಯಿತು. ಮನೆಯ ಒಳಗೂ ಬಂದು ಜೇಡಗಳನ್ನು  ಚೆನ್ನಾಗಿತ್ತು ಎಂದೆನಿಸಿತು. ಮಧ್ಯೆ-ಮಧ್ಯೆಯಲ್ಲಿ ಬಾಲ್ಕನಿಯಲ್ಲಿ ನಾವು ಹಾಕುತಿದ್ದ ಮುಂಡಕ್ಕಿಯನ್ನೂ ತಿನ್ನಿಸಿತಿತ್ತು. ಪ್ರೊಟೀನ್, ಪಿಷ್ಟ, ಕ್ಯಾಲ್ಷಿಯಂ ಇತ್ಯಾದಿಗಳ ಸಮತೋಲನ ಕಾಯ್ದುಕೊಂಡುಬರುತಿತ್ತು. ಗುಟುಕು ಕೊಡುವುದರಲ್ಲಿ ಹೆಣ್ಣು ಹಕ್ಕಿ ಜಾಸ್ತಿ ಸಕ್ರಿಯವಾಗಿದ್ದರೂ, ಆಗಾಗ್ಯೆ ಗಂಡು ಹಕ್ಕಿಯೂ ಆಹಾರ ತಂದು ಕೊಡುತಿತ್ತು. ಮರಿಹಕ್ಕಿ ಬೆಳೆದಂತೆಲ್ಲಾ ಗುಟುಕಿಗಾಗಿ ಅವುಗಳ ಕೂಗು ಜೋರಾಗಿತ್ತು. ಒಮ್ಮೊಮ್ಮೆ ನಮ್ಮನ್ನು ನೋಡಿ ವಿಭಿನ್ನ ರೀತಿಯಲ್ಲಿ ಚಿವ್-ಚಿವ್-ಚಿವ್ ಯಂದು ಕೂಗಿ ಮುಂಡಕ್ಕಿ ಖಾಲಿಯಗಿದ್ದನ್ನು ತಿಳಿಸುತಿತ್ತು..!!!! ಮುಂಡಕ್ಕಿ ಯಾ ಅಕ್ಕಿ ಹಾಕಿದಾಗ ತುಂಬಾ ಖುಶಿಯಿಂದ ಮರಿಗೆ ಉಣಿಸುತಿತ್ತು.!!! ಮಣ್ಣಿನ ಪಾತ್ರೆಯಲ್ಲಿಟ್ಟ ನೀರು ಕುಡಿಯುವುದಲ್ಲದೇ, ತೀವ್ರ ಸೆಕೆಯಲ್ಲಿ ಸ್ನಾನಮಾಡಿ ದೇಹವನ್ನು ತಂಪಾಗಿಸಿಕೊಳ್ಳುತ್ತಿದವು..  ಇನ್ನೊಂದು ಆಶ್ಚರ್ಯವೆಂದರೆ ಮರಿಹಕ್ಕಿಯ ಹಿಕ್ಕೆಯನ್ನು ತನ್ನ ಕೊಕ್ಕಿನಿಂದ ತಂದು ಹೊರಹಾಕುತಿತ್ತು.!!! ಗೂಡಿನ ಸ್ವಚ್ಚತೆಯನ್ನು ಕಾಯ್ದುಕೊಳ್ಳುವಲ್ಲಿ ಮುನಿಯಾ ಗುಬ್ಬಚ್ಚಿಯೇ ಮೇಲು!! ಆದರೆ ಗುಬ್ಬಚ್ಚಿ ಹಿಕ್ಕೆಯನ್ನು ತಂದು ಬಾಲ್ಕನಿ ನೆಲದಮೇಲೆ, ಗ್ರಿಲ್ ಗಳ ಮೇಲೆಲ್ಲಾ ಹಾಕಿ ಗಲೀಜು ಮಾಡುತಿತ್ತು.!!! ಬಾಲ್ಕನಿಯನ್ನು ಸ್ವಚ್ಛಮಾಡುವುದು ನಮ್ಮ ಕೆಲಸ!!. (ಅಕ್ಕ-ಪಕ್ಕದ ಮನೆಯವರು ತಮ್ಮ ಮನೆಯ ಕಸವನ್ನು ಕಾಂಪೌಡಿನ ಹೊರಗೆ ಹಾಕಿದ ಹಾಗಾಯಿತು!!!. )
ಒಂದು ದಿನ ಬೆಳಿಗ್ಗೆ ಎರಡೂ ಗುಬ್ಬಚ್ಚಿಗಳು ಚೀವ್..ಚೀವ್..ಚೀವ್..ಚೀವ್..ಚೀವ್... ಎಂದು ವಿಚಿತ್ರವಾಗಿ ಎಡೆಬಿಡದೆ ಜೋರಾಗಿ ಕೂಗಲಾರಂಭಿಸಿದವು. ತಕ್ಷಣ ಬಂದುನೋಡಿದರೆ ಕಾಗೆಯೊಂದು ಗ್ರಿಲ್ ಮೇಲೆ ಕೂತು ಗುಬ್ಬಚ್ಚಿ ಗೂಡನ್ನು ನೋಡುತಿತ್ತು... ಆ 'ಕಾಗೆ ಕಣ್ಣಿಗೆ' ಗುಬ್ಬಚ್ಚಿ ಗೂಡು ಕಂಡೇಬಿಟ್ಟಿತು.... ಕಾಗೆಯನ್ನು ಓಡಿಸಿದೆವು... ಹಕ್ಕಿಗಳ ತಳಮಳ ಶಾಂತವಾಯಿತು... ಕಾಗೆ ಮತ್ತಿತ್ತರ ಪರಭಕ್ಷಕ ಹಕ್ಕಿಗಳಿಂದ ರಕ್ಷಣೆಗಾಗಿ ಸಾಮಾನ್ಯವಾಗಿ ಗುಬ್ಬಚ್ಚಿಗಳು ಮನುಷ್ಯರ ವಡನಾಟದಲ್ಲಿ ಮನೆಯನ್ನು ಕಟ್ಟುತ್ತವೆ... ಹಿಂದಿನಕಾಲದ ಮನೆಗಳು ತೆರೆದ ಮನೆಗಳಾಗಿದ್ದು ಗುಬ್ಬಚ್ಚಿಗಳಿಗೂ ಅಪಾಯದ ಸಮಯದಲ್ಲಿ ಗೂಡಿನಿಂದ ಹೊರಹೋಗಲು ಅನುಕೂಲವಾಗಿತ್ತು. ಈಗಿನ ಕಿಟಿಕಿ ಬಾಗಿಲುಗಳಿಂದ ಮುಚ್ಚಿದ ಮನೆಗಳು ಗುಬ್ಬಚ್ಚಿಗಳಿಗೆ ಸೂಕ್ತವಾಗಿಲ್ಲ... ನಾನು ಕಂಡಂತೆ, ಈ ತರಹದ ತೆರೆದ ಕಟ್ಟಡಗಳಾದ ದೇವಸ್ತಾನಗಳಲ್ಲಿ, ತೆರೆದ ಸ್ಟೇಡಿಯಂಗಳಲ್ಲಿ ಮಾತ್ರ ಗುಬ್ಬಚ್ಚಿಗಳು ಕಾಣಸಿಗುತ್ತಿವೆ... ಅಂದರೆ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಇತ್ತೀಚಿನ ಮನೆಗಳ ವಿನ್ಯಾಸವೂ ಕಾರಣವಿರಬಹುದೇ???
ಸರಿಯಾಗಿ ೧೭ ನೇ ದಿನ ಮರಿಹಕ್ಕಿ ಗೂಡಿನಿಂದ ಹೊರಬಂದಿತು... ರೆಕ್ಕೆ ಬಲಿತಿದ್ದರೂ ಹಾರಲು ಅಷ್ಟೇನು ಶಕ್ತವಾಗಿರಲಿಲ್ಲ.. ಗ್ರಿಲ್ ಮೇಲೆ ಕೂತಿದ್ದ ಮರಿಗೆ ಅಲ್ಲಿಯೇ ಊಟಮಾಡಿಸುತಿತ್ತು... ೧ ಗಂಟೆಯ ನಂತರ ಮರಿಹಕ್ಕಿ ಧೈರ್ಯಮಾಡಿ ಹಾರಿಹೋಯಿತು. ಮುನಿಯಾದಂತೆ ಪೋಷಕ ಹಕ್ಕಿಗಳ ಬೆಂಗಾವಲು ಇರಲಿಲ್ಲ. ಹಾರಿಹೋದ ಮರಿ ಮತ್ತೆ ಬರಲೇಯಿಲ್ಲ....

ಮರುದಿನವೇ ಜೋಡಿಹಕ್ಕಿಗಳ ಸಂಸಾರ ಮತ್ತೆ ಶುರುವಾಯಿತು....ಗೂಡನ್ನು ಸ್ವಚ್ಛಗೊಳಿಸುವ ಕಾರ್ಯ ಶುರುವಾಯಿತು... ಗೂಡಿನಲ್ಲಿದ್ದ ಹಿಕ್ಕೆಯನ್ನೆಲ್ಲಾ ಕೊಕ್ಕಿನಿಂದ ಹೆಕ್ಕಿತಂದು ಹೊರಹಾಕಲು ಸುಮಾರು ೨ ದಿನಗಳೇ ಬೇಕಾಯಿತು. ಆಮೇಲೆ ಹುಲ್ಲು, ಹತ್ತಿ, ಅಜ್ಜರಗಡ್ಡ ಇತ್ಯಾದಿಗಳನ್ನು ತಂದು ಗೂಡನ್ನು ಪೂರ್ಣಗೊಳಿಸಿದವು. ಒಂದು ತಿಂಗಳ ನಂತರ ೨ ಮರಿಗಳನ್ನು ಸಾಕಿ ಹಾರಿಬಿಟ್ಟವು... ಅದಾದ ಮೇಲೆ ಮಗದೋಮ್ಮೆ... ಹೀಗೆ ಬಾಲ್ಕನಿಯ "ಗೂಡು ಪೆಟ್ಟಿಗೆ" ಗುಬ್ಬಚ್ಚಿಯ ಖಾಯಂ ಗೂಡಾಯಿತು....

ನೀವೂ  ಮಾಡಿನೋಡಿ!!! ಇಲೆಕ್ಟ್ರಾನಿಕ್ ಸಾಮಾನು ಇತ್ಯಾದಿಗಳ ಪ್ಯಾಕಿಂಗ್ನಲ್ಲಿ ಬರುವ ರಟ್ಟಿನ ಪೆಟ್ಟಿಗೆಯನ್ನು ಮಕ್ಕಳಿಗೆ, ಬೆಕ್ಕುಗಳಿಗೆ  ಸಿಗದಷ್ಟು ಎತ್ತರದಲ್ಲಿ ಜೋಡಿಸಿ... ಸ್ವಲ್ಪ ನೀರು ಮತ್ತು ಅಕ್ಕಿಕಾಳುಗಳನ್ನಿಟ್ಟು ಹಕ್ಕಿಗಳನ್ನು ಆಕರ್ಷಿಸಿ... ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳನ್ನು ಉಳಿಸಲು ಪ್ರಯತ್ನಿಸೊಣ.
ನಾಗರಾಜ ಅಡಿಗ,
ಕೈಗಾ ವಿದ್ಯುತ್ ಕೇಂದ್ರ. 

Wednesday, 24 February 2016

ಶಿರ್ವೆ ಗುಡ್ಡದಲ್ಲೊಂದು ಸ್ವಚ್ಚತಾ ಅಭಿಯಾನ...

ಶಿರ್ವೆ ಗುಡ್ಡದಲ್ಲೊಂದು ಸ್ವಚ್ಛತಾ ಅಭಿಯಾನ
ಇದೇ ಜನವರಿ ತಿಂಗಳ ಅಷ್ಟೇನೂ ಚಳಿಯಿಲ್ಲದೆ ತುಂಬಾ ಆಹ್ಲಾದಕರವಾದ ಒಂದು ಮುಂಜಾವು...ಬೆಳ್ಳಂಬೆಳಿಗ್ಗೆಯೇ ಕೈಗಾ ನೇಚರ್ ಕ್ಲಬ್ ಹತ್ತಿರ ಜನ ಒಗ್ಗೂಡಲು ಶುರುವಾದರು. ಹೆಂಗಸರು, ಮಕ್ಕಳು ಸೇರಿ ನೋಡತ್ತಲೇ ಸುಮಾರು 50-60 ಜನರು ಸೇರಿಯಾಯಿತು...ಎಲ್ಲರೂ ಉತ್ಸಾಹಿತರಾಗಿದ್ದು ತಲೆಗೊಂದು ಟೊಪಿ, ಕಾಲಿಗೆ ಶೂ, ಬೆನ್ನಿಗೆ ಚೀಲ, ಕಣ್ಣಿಗೊಂದು ಕಪ್ಪು ಕನ್ನಡಕ.! ಕೆಲವರ ಕೈಯಲ್ಲಿ ಕ್ಯಾಮರಾ ಮತ್ತು ದುರ್ಬೀನು...ನಿಮಗೀಗಗಲೇ ಅನಿಸಿರಬಹುದು ಇವರೆಲ್ಲಾ ಸೇರಿರುವುದು ಪ್ರಕೃತಿ ವೀಕ್ಷಣೆಗಾಗಿ!!..ಟ್ರಕ್ಕಿಂಗ್‍ಗಾಗಿ.. ಕೈಗಾ ನೇಚರ್ ಕ್ಲಬ್ ವತಿಯಿಂದ ಕೈಗಾ ವಸತಿ ಸಂಕೀರ್ಣದ ಸಮೀಪದ ಶಿರ್ವೆ ಗುಡ್ಡಕ್ಕೆ ಪ್ರಕೃತಿ ವೀಕ್ಷಣಾ ನಡಿಗೆಯನ್ನು ಆಯೋಜಿಸಿಲಾಗಿತ್ತು. ಕೈಗಾ ಪರಿಸರದ ಬಗ್ಗೆ ಓದುಗರಿಗೆ ಸ್ವಲ್ಪ ತಿಳಿಸುವುದು ಈಗ ಸಾಂದರ್ಭಿಕ. 90ರ ದಶಕದಲ್ಲಿ ಭಾರತೀಯ ಅಣು ವಿದ್ಯುತ್ ನಿಗಮವು ಕೈಗಾವನ್ನು ಅಣು ವಿದ್ಯುದಾಗಾರಕ್ಕಾಗಿ ಪ್ರದೇಶವೆಂದು ಘೋಷಿಸುವ ತನಕ ಕೈಗಾವು ಹೊರಜಗತ್ತಿಗೆ ಬಹುಷ: ತಿಳಿದೇ ಇರಲಿಲ್ಲ. ಕೈಗಾವು ಕಾರವಾರದಿಂದ ಸುಮಾರು 60 ಕಿಮೀ ದೂರದಲ್ಲಿ ಕಾಳಿನದಿಯ ದಂಡೆಯಮೇಲೆ ಪಶ್ಚಿಮ ಘಟ್ಟದ ತಪ್ಪಲಿನ್ನಲ್ಲಿರುವ ಚಿಕ್ಕ ಗ್ರಾಮ.. ಪಶ್ಚಿಮ ಘಟ್ಟವು ಯಥೇಷ್ಚ ಮಳೆಗೆ ಹೇಗೆ ಪ್ರಸಿದ್ಧವೊ ಹಾಗೆಯೇ ಇಲ್ಲಿನ ಸಸ್ಯ-ಪ್ರಾಣಿ ಸಂಕುಲಗಳ ವೈವಿದ್ಯತೆಯೂ ಪ್ರಸಿದ್ಧ... ತನ್ನದೇ ಆದ ವಿಶಿಷ್ಟ ಪರಿಸರ ವ್ಯವಸ್ಥೆಯನ್ನು ಹೊಂದಿದ ಈ ಪಶ್ಚಿಮ ಘಟ್ಟದಲ್ಲಿರುವ ಕೆಲವು ಪ್ರಾಣಿ-ಪಕ್ಷಿಗಳು ಇಲ್ಲಿ ಮಾತ್ರ ಕಾಣಸಿಗುತ್ತವೆ... ಪಶ್ಚಿಮ ದಿಕ್ಕನ್ನು ತೊರತುಪಡಿಸಿ ಸುತ್ತೆಲ್ಲಾ ಪರ್ವತಗಳಿಂದ ಸುತ್ತವರಿದ ಕೈಗಾವು ಬಟ್ಟಲಿನಾಕಾರವಾಗಿ ಕಂಡಬರುತ್ತದೆ. ಕೈಗಾ ವಸತಿ ಸಂಕೀರ್ಣವು ಕೈಗಾದಿಂದ ಸುಮಾರು 18 ಕಿಮೀ ದೂರದಲ್ಲಿದ್ದು ಇದೂ ಸಹ ಪರ್ವತಗಳಿಂದ ಸುತ್ತುವರಿದಿದೆ...ಅಷ್ಟೇ ಅಲ್ಲದೆ ಪರ್ವತಗಳೆಲ್ಲಾ ದಟ್ಟವಾದ ಕಾಡಿನಿಂದ ಹೊದಿಯಲ್ಪಟ್ಟಿದೆ..ಸಮೀಪದಲ್ಲಿ ಹರಿಯುವ ಕಾಳಿನದಿಯು ಪ್ರದೇಶದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ..ಸುತ್ತು ಕಣ್ಣಹಾಯಿಸಿದಷ್ಟು ಹಚ್ಚಹಸಿರೇ ಕಾಣಸುತ್ತದೆ...ಈ ಪ್ರಕೃತಿಯ ಮಡಿಲಲ್ಲಿರುವ ನಮಗೆ ಅಕ್ಷರಸ: ಹಸಿರೇ ಉಸಿರು.!!!
ಕೈಗಾ ನೇಚರ್ ಕ್ಲಬ್‍ನ ಎದುರು ಸೇರಿದವರೆಲ್ಲಾ ಸಾಲಾಗಿ ನಿಂತ ನಂತರ ಕ್ಲಬ್‍ನ ಸದಸ್ಯ ಶ್ರೀ ಹರದೀಪ್ ಸಿಂಗ್‍ರಿಂದ ಶಿರ್ವೆ ಗುಡ್ಡದ ಟ್ರಕ್ಕಿಂಗ್‍ನ ವಿವರಣೆ ಹಾಗೂ ಉಪಯುಕ್ತ ಸಲಹೆ-ಸೂಚನೆಗಳು. ನಂತರ ಕ್ಲಬ್‍ನ ಕಾರ್ಯದರ್ಷಿ ಶ್ರೀ ವೇಣುಗೋಪಾಲರಿಂದ ಈ ಪ್ರಕೃತಿ ವೀಕ್ಷಣೆಯ ಮಹತ್ವದ ಬಗ್ಗೆ ಸಂಕ್ಷಿಪ್ತ ವಿವರಣೆ. ಕಳೆದ 5-6 ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಪ್ರತಿ ವರ್ಷವೂ ನಿರೀಕ್ಷೆಗೆ ಮೀರಿ ಪ್ರತಿಕೃಯೆ ಬರುತ್ತಿದ್ದು, ಪ್ರಕೃತಿ ವೀಕ್ಷಣೆಯ ಸಂಗಡ “ಸ್ವಚ್ಛತಾ ಅಭಿಯಾನ”ವನ್ನೂ ನಡೆಸುತ್ತಾ ಬರಲಾಗುತ್ತಿದೆ. ಪ್ರತಿ ವರ್ಷವೂ ಮಕರ ಸಂಕ್ರಾಂತಿಯ ಮಾರನೇ ದಿನ ಈ ಶಿರ್ವೆಗುಡ್ಡದಲ್ಲಿರುವ ಚೆನ್ನಬಸವೇಶ್ವರ ದೇವಾಲಯದಲ್ಲಿ ಜಾತ್ರೆಯಾಗುತ್ತಿದ್ದು 5 ಕಿಮೀ ಕಾಲ್ನಡಿಗೆಯಲ್ಲಿಯೇ ಸಾವಿರಾರು ಜನರು ಸೇರುತ್ತಾರೆ... ಜಾತ್ರೆ ಹಗಲೂ-ರಾತ್ರಿ ಇಡೀ ದಿನ ನಡೆದು, ರಾತ್ರಿ ಯಕ್ಷಗಾನ/ನಾಟಕ ಇತ್ಯಾದಿ ಮನೋರಂಜನಾ ಕಾರ್ಯಕ್ರಮಗಳೂ ನಡೆಯುತ್ತವೆ...ಪ್ರಕೃತಿಯ ಮಡಿಲಲ್ಲಿರುವ ಈ ದೇವಾಲಯದ ಜಾತ್ರೆಯು ಜನರಿಗೆ ಪ್ರಕೃತಿ ವೀಕ್ಷಣೆಯೊಂದಿಗೆ ಆಧ್ಯಾತ್ಮಿಕ ಹಬ್ಬವೂ ಆಗಿದೆ.. ಸಾವಿರಾರು ಜನಸೇರುವ ಜಾತ್ರೆಯಂದರೆ ಕೇಳವೇಕೇ..? ಎಲ್ಲವೂ ಪ್ಲಾಷ್ಟಿಕ್‍ಮಯವಾದ ಈ ಕಾಲದಲ್ಲಿ ಶಿರ್ವೆಗುಡ್ಡ ಪ್ರತಿವರ್ಷ ಕಸದತೊಟ್ಟಿಯಾಗುತ್ತಿತ್ತು...ಪ್ರಕೃತಿಯ ಬಗ್ಗೆ ಕಾಳಜಿಯಿರುವ ಒಂದಿಷ್ಟು ಜನರ ಪರಿಶ್ರಮದ ಕೂಸಾಗಿ ಈ ಶಿರ್ವೆಗುಡ್ಡದ ಪ್ರಕೃತಿ ವೀಕ್ಷಣೆಯ ಸಂಗಡ “ಸ್ವಚ್ಛತಾ ಅಭಿಯಾನ” ಆರಂಭಗೊಂಡಿತು. ನಮ್ಮನ್ನು ಪ್ರೀತಿಯಿಂದ ಸಾಕುತಿರುವ ಪ್ರಕೃತಿ ಮಾತೆಯ ಉಳಿವಿಗೆ ಚಿಕ್ಕದೊಂದು ಕೊಡುಗೆ.. ಕಾರ್ಯಕ್ರಮ ರೋಮಾಂಚಕ, ಮನೋರಂಜನೆಯ ಜೊತೆಗೆ ಅರ್ಥಗರ್ಭಿತವೂ ಆಗಿತ್ತು. ಈ ಭಾರಿ ನಾನೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಮುಖ್ಯ ಅಧೀಕ್ಷಕರಾದ ಶ್ರೀ ಕೆ ಕೆ ಬಜಾಜ್‍ರ ಹಸಿರು ನಿಶಾನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ಸುಮಾರು 15 ಕಿಮೀ ಬಸ್ ಪ್ರಯಾಣದ ಬಳಿಕ ನಾವು ಗುಡ್ಡದ ಬುಡಕ್ಕೆ ಬಂದೆವು. ಅಲ್ಲಿಯೇ ನಮ್ಮ ಬೆಳ್ಳಗಿನ ಉಪಹಾರ...ರುಚಿ-ರುಚಿಯಾದ ಇಡ್ಲಿ-ವಡೆ. ನಾವೆಲ್ಲರೂ ಮನೆಯಿಂದಲೇ ಸ್ಷೀಲ್ ತಟ್ಟೆ ಹಾಗೂ ಲೋಟಗಳನ್ನು ತಂದಿದ್ದೆವು....ಮರಗಳ ನೆರಳಲ್ಲಿ ಕೂತು ಸುತ್ತಮುತ್ತಲಿನ ಪರಿಸರ ವೀಕ್ಷಿಸುತ್ತಾ ನಾಷ್ಟಾ ಮಾಡಿದೆವು. ವಾತಾವರಣ ತಂಪಾಗಿ ಉಲ್ಲಾಸಕರವಾಗಿತ್ತು. ಟೀ ಕುಡಿದೆವು. ಮುಂದಿನ ಪ್ರಯಾಣ ಶಿರ್ವೆಗುಡ್ಡಕ್ಕೆ!..ಗುಡ್ಡದ ತುದಿ ಅಲ್ಲಿಂದಲೇ ಕಾಣಿಸುತ್ತಿತ್ತು. ಪ್ರತಿಯೊಬ್ಬರಿಗೂ ಕಸತುಂಬಲು ಒಂದೊಂದು ಚೀಲ ಕೊಡಲಾಯಿತು..ಪ್ಲಾಷ್ಟಿಕ್ ಕಸಗಳನ್ನು ಮಾತ್ರ ತೆಗೆಯಲು ಆಯೋಜಿತರಿಂದ ಸಲಹೆ. ಪ್ರಯಾಣಿಸುವ ದಾರಿ ಸಾಕಷ್ಟು ಅಗಲವಾಗಿಯೇ ಇತ್ತು. ಇಕ್ಕೆಲಗಳಲ್ಲಿ ದಟ್ಟವಾದ ಎತ್ತರವಾದ ಕಾಡು. ಎರಡೂ ಬದಿಯ ಮರಗಳ ಕೊಂಬೆಗಳು ಮಧ್ಯೆಕ್ಕೆ ಚಾಚಿ ನಮ್ಮ ದಾರಿಗೆ ಚಪ್ಪರಹಾಕಿದಂತಿತ್ತು. ಆ ಮರಗಳ ನೆರಳು ನಮ್ಮ ನಡಿಗೆಯನ್ನು ಸಲೀಸಾಗಿಸಲ್ಲದೆ ಹುರಿದುಂಬಿಸಿತಿತ್ತು. ಆ ದಟ್ಟಕಾಡಿನ ಮರಗಳು ವಿಭಿನ್ನವಾಗಿದ್ದವು. ಹೆಚ್ಚಾಗಿ ನಿತ್ಯಹರಿದ್ವರ್ಣದ ಮರಗಳಿದ್ದರೂ ಚಳಿಗಾಲದಲ್ಲಿ ಎಲೆ ಉದುರಿಸಿಕೊಳ್ಳುವ ಅನೇಕ ಮರಗಳಿದ್ದವು. ಆ ಮರಗಳು ಬೇರೆ ಬೇರೆ ಹಂತದಲ್ಲಿದ್ದು ವಿಭಿನ್ನ ಬಣ್ಣದಿಂದ ಕಂಗೊಳಿಸುತ್ತಿದ್ದವು..ಕೆಲವು ಹಣ್ಣೆಲೆಗಳಿಂದ ಕೆಂಪು, ಹಳದಿ ಬಣ್ಣದಿಂದ ಅಲಂಕೃತವಾಗಿದ್ದರೆ ಇನ್ನು ಕೆಲವು ಈಗಷ್ಟೇ ಕುಡಿಬಂದು ನೇರಳೆ, ಕಂದು, ಕೆಂಪು, ತಿಳಿಹಸಿರು, ಹಚ್ಚಹಸಿರು ಬಣ್ಣದಿಂದ ತಂಬಿದ್ದು ರಥಗಳಂತೆ ಕಂಡುಬಂದವು.!! ಇನ್ನು ಕೆಲವು ಗೊಮ್ಮಟೇಶ್ವರನಂತೆ ಬೋಳಾಗಿದ್ದವು.!!!!ಮರಗಳಿಂದ ಬಿದ್ದ ಒಣಎಲೆಗಳು ನಮ್ಮ ದಾರಿದಲ್ಲಿ ಹಾಸಿಗೆ ಹಾಸಿದಂತಿತ್ತು. ಪ್ರಕೃತಿಯ ಸೊಬಗು ಒಂದೆಡೆಯಾದರೆ ದಾರಿಯುದಕ್ಕೂ ನೀರಿನ ಬಾಟೆಲ್, ಬಿಸ್ಕೆಟ್ ಪ್ಯಾಕ್‍ಗಳು, ಚಾಕಲೇಟ್ ಜರಿಗಳು ಜನರ ಪ್ರಕೃತಿಯ ಬಗ್ಗೆಯ ಅಸಡ್ಡೆಯನ್ನು ತೋರಿಸಿತಿತ್ತು. ಈ ಕಸಗಳನ್ನೆಲ್ಲಾ ಹೆಕ್ಕಿ ಚೀಲದಲ್ಲಿ ತುಂಬಲು ಶುರುಮಾಡಿದೆವು. ಹಾಗೆ ತುಂಬಿದ ಚೀಲವನ್ನು ಅಲ್ಲಿಯೇ ಬರುವಾಗ ತರಲು ಬದಿಗಿಟ್ಟೆವು...ಮೊದಲು ಸಮತಲವಾಗಿದ್ದ ದಾರಿ ಮುಂದುಹೊಗುತ್ತಿದ್ದಂತೆ ಏರಿಕೆಯಾಗಲು ಶುರುವಾದರೂ ಪ್ರಯಾಣ ಕಷ್ಟಕರವೇನೂ ಆಗಿರಲಿಲ್ಲಿ. ಆದರೆ ದಾರಿಯು ಇಳಿಜಾರಾದ ಗುಡ್ಡದ ಅಂಚಿನಲ್ಲಿ ಸಾಗುತ್ತಿದ್ದು ಎಡಗಡೆ ಕಣಿವೆ ಹಾಗೂ ಬಲಗಡೆ ಕಡಿದಾದ ಪರ್ವತವಿತ್ತು...ಹೀಗೆ ಸಾಗುತ್ತಿರುವಾಗ ನಮ್ಮ ಮುಂದೆ ಸಾಗುತ್ತಿದ್ದ ಗುಂಪೊಂದು ನಿಂತು ಏನನ್ನೋ ತದೇಕ ದೃಷ್ಟಿಯಿಂದ ನೋಡುತ್ತಿರುವುದು ಕಂಡುಬಂತು...ಕೂಡಲೇ ಧಾವಿಸಿ ನೋಡಿದಾಗ ಕಂಡುಬಂದದ್ದು ಒಂದು ಮರಿಹಾವು...ಮಂಡಲಹಾವಾಗಿತ್ತು. ಶಾಂತವಾಗಿದ್ದ ಹಾವಿನ ಫೋಟೋ ತೆಗೆದುಕೊಂಡೆವು...ಕೆಲವರಂತೂ “ಸೆಲ್ಫೀ ವಿದ್ ಸ್ನೇಕ್” ಸಹ ತೆಗೆಸಿಕೊಂಡರು..
ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ನಾವು ತಲುಪಿದ್ದು ಚೆನ್ನಬಸವೇಶ್ವರ ದೇವಾಲಯ...ಸಾಕಷ್ಟು ಸಮತಟ್ಟಾದ ಪ್ರದೇಶದಲ್ಲಿ ದೇವಾಲಯದ ಸುತ್ತಲೂ ಹಸಿರು ಹೊದಿಕೆ ಹೊದ್ದ ಪರ್ವತಗಳು...ಅಲ್ಲಿಯೇ ಒಂದು ಚಿಕ್ಕ ಝರಿಯಲ್ಲಿ ತಂಪಾದ ನೀರು ಹರಿದು ಬರುತಿತ್ತು..ಕಾಲು-ಮುಖ ತೊಳೆದು ಸ್ವಲ್ಪ ದಣಿವಾರಿಸಿಕೊಂಡೆವು. ನಾವು ಹತ್ತಬೇಕಾಗಿದ್ದ ಶಿರ್ವ ಗುಡ್ಡದ ತುತ್ತ ತುದಿ ಕಾಣಿಸಿತ್ತಿತ್ತು. ಅದರ ಮೇಲೊಂದು ಬಿಳಿಬಟ್ಟೆಯ ಭಾವುಟ ಹಾರಾಡುತಿತ್ತು...ಆ ಎತ್ತರದ ಗುಡ್ಡದ ಮೇಲೆ ಬೀಸುತ್ತಿರುವ ತಂಗಾಳಿ ದಣಿವಾರಿಸದ್ದಲ್ಲೇ ನಮ್ಮನ್ನು ಮುಂದಿನ ಕಾರ್ಯಕ್ರಮಕ್ಕೆ ಹುರಿದುಂಭಿಸಿತಿತ್ತು.!





ದೇವಾಲಯದ ಸುತ್ತಲೂ ಸಾಕಷ್ಟು ಪ್ಲಾಷ್ಟಿಕ್ ಕಸಗಳಿದ್ದವು. ಶುರುಮಾಡಿದೆವು ನಮ್ಮ ಸ್ವಚ್ಛತಾ ಅಭಿಯಾನ.! ಎಲ್ಲರೂ ಹುಮ್ಮಸ್ಸಿನಿಂದ, ನಿಷ್ಟೆಯಿಂದ   ಪ್ಲಾಷ್ಟಿಕ್ ಕಸಗಳನ್ನು ಹೆಕ್ಕಿ ಚೀಲಕ್ಕೆ ತುಂಬುತ್ತಿದ್ದರು...45 ನಿಮಿಷಗಳಲ್ಲಿ ದೇವಸ್ಥಾನದ ಪರಿಸರವೆಲ್ಲಾ ಕ್ಲೀನ್!!.ಎಲ್ಲರೂ ಸೇರಿ ಮಾಡಿದ ಕೆಲಸದಲ್ಲಿ ಆಯಾಸವೇ ಅನಿಸಿರಲಿಲ್ಲ...ಮತ್ತೊಮ್ಮೆ ಕೈ-ಮುಖ ತೊಳೆದು ಮುಂದಿನ ಪರ್ವತಾರೋಹಣಕ್ಕೆ ಶುರು.!
 ಮುಂದಿನ ನಡಿಗೆಗೆ “ಪರ್ವತಾರೋಹಣ” ಶಬ್ದ ಸರಿಯೆನಿಸಿತು. ಒಬ್ಬರೇ ನಡೆಯಬಹುದಾದ ತುಂಬಾ ಕಿರಿದಾದ ದಾರಿ, ಅಲ್ಲಲ್ಲಿ ಸಣ್ಣ-ದೊಡ್ಡ ಕಲ್ಲುಗಳು...ಏರಿಕೆ ತುಂಬಾನೇ ತ್ರಾಸತರುತಿತ್ತು. ಸ್ವಲ್ಪ ಜಾರಿ ಬಿದ್ದರೂ ಸಾವರಿಸಿಕೊಳ್ಳುವುದು ಕಷ್ಟವೇ...ಅಲ್ಲದೇ ಒಬ್ಬರಿಂದ ಇನ್ನೊಬ್ಬರು/ಮತ್ತೊಬ್ಬರು ಸರಣಿಯಲ್ಲಿ ಬೀಳುವ ಸಂಭವವೂ ಇದೆ. ಕಿರಿದಾದ ದಾರಿಯಲ್ಲಿ ಮುಂದಿರುವರನ್ನು ಹಿಂದಿಕ್ಕುವ ಕೆಲಸ ಸಾಧ್ಯವಿಲ್ಲ...ಕೈಯಲ್ಲಿರುವ ಕೋಲು ನಮ್ಮ ಸಮತೋಲನ ಕಾಪಾಡಲು ಸಹಾಯ ಮಾಡುತಿತ್ತು. ಅರಣ್ಯ ಮತ್ತೂ ದಟ್ಟವಾಯಿತು...ಪರಿಸರ ವೀಕ್ಷಣೆ ಈಗ ಅಸಾಧ್ಯವೇ ಸರಿ...ಪ್ರತಿಯೊಂದು ಹೆಜ್ಜೆಯಿಡುವಾಗಲೂ ನೋಡಿ ಜಾಗರೂಕತೆಯಿಂದ ಇಡಬೇಕು...ಅಲ್ಲಲ್ಲಿ ಅನುಕೂಲಕರ ಜಾಗ ನೋಡಿ ಸ್ವಲ್ಪ-ಸ್ವಲ್ಪ ಕುಳಿತುಕೊಂಡು ಮುಂದೆಸಾಗುತಿದ್ದೆವು. 45 ನಿಮುಷ ಕ್ಲಿಷ್ಟಕರವಾದ ಪ್ರಯಾಣದ ನಂತರ ಸಿಕ್ಕಿದ್ದು ಶಿರ್ವಗುಡ್ಡದ ತುತ್ತ ತುದಿ..ಕೊನೆಯ 20 ಮೀ ಕಡಿದಾದ ಬಂಡೆಯಾಗಿದ್ದು ಹತ್ತಲು ಏಣಿಯೇ ಬೇಕು. ಗುಡ್ಡದ ಆ ಶಿಖರವನ್ನು ಎಲ್ಲಿಂದಲೋ ಆಕಾಶ ಮಾರ್ಗವಾಗಿ ತಂದು ಕೂರಿಸಿಟ್ಟಂತಿತ್ತು.!! ಅದನ್ನೂ ಹತ್ತಿದಾಗ ಆದ ಅನುಭವ ಅವರ್ಣನೀಯ.!!. ಪರ್ವತದ ತುದಿಯಿಂದ ವೀಕ್ಷಿಸಿದಾಗ ಎಲ್ಲವೂ ‘ಪಕ್ಷಿನೋಟ’. ಎಡಕ್ಕೂ ಬಲಕ್ಕೂ ಸ್ವಲ್ಪ ಕಿರಿದಾದ ಬೆಟ್ಟಗಳು...ಮುಂದೆ ಮತ್ತು ಹಿಂದೆ ಇಳಿಜಾರು ಪ್ರದೇಶ...ಸುತ್ತಮುತ್ತಲಿನ ಎಲ್ಲಾ ಪರ್ವತಗಳನ್ನು ಹೊದ್ದಿರುವ ದಟ್ಟದಾದ ಹಚ್ಚ ಹಸಿರಿನ ಕಾಡುಮರಗಳು.. ಹಚ್ಚ ಹಸಿರಿನ ಮಧ್ಯೆ-ಮಧ್ಯೆಯೊಂದಿಷ್ಟು ಕೆಂಪು, ಕಂದು, ನೇರಳೆ, ಹಳದಿ ಬಣ್ಣಗಳ ವಿವಿಧ ಚಳಿಗಾಲದಲ್ಲಿ ಎಲೆಉದುರುವ ಮರಗಳು. ಧಿಟ್ಟವಾಗಿ ನಿಂತಿದ್ದ ಪರ್ವತಗಳು ಹೊದ್ದ ಹಸಿರು ಹೊದಿಕೆಯ ಮೇಲೆ ಮೂಡಿಸಿದ ಬಣ್ಣ-ಬಣ್ಣದ ಚಿತ್ತಾರದಂತಿತ್ತು.!!! ದೂರದಲ್ಲಿ ಕೈಗಾ ವಸತಿ ಸಂಕೀರ್ಣ ಕಟ್ಟಡಗಳು ಹಸಿರು ಪಾರ್ಕಿನ ಮಧ್ಯದಲ್ಲಿ ನಿರ್ಮಿಸಿದಂತಿತ್ತು. ನಾವಿರುವ 12 ಮಹಡಿಯ ಕಟ್ಟಡ ಸಹಾ ಚಿಕ್ಕದಾಗಿ ಕಾಣಿಸಿತಿತ್ತು. ಅದರ ಹಿಂದೆ ಕಾಳಿ ನದಿ ಮತ್ತು ಮತ್ತೊಂದು ಸಾಲು ಪರ್ವತ ಶ್ರೇಣಿಗಳು... ಕೈಗಾ ವಸತಿ ಸಂಕೀರ್ಣದ ಸ್ವಲ್ಪ ಬಲಗಡೆ ಕದ್ರಾ ಅಣೆಕಟ್ಟು ಮತ್ತು ಜಲಾಶಯ... ಗುಡ್ಡದ ಹಿಂಬದಿಯಲ್ಲೂ ಇಳಿಜಾರದ ಕಾಡು ಪ್ರದೇಶ, ನಂತರ ಕೆಲ ಗ್ರಾಮಗಳು, ನಂತರ ಮತ್ತೊಂದು ಪರ್ವತ ಶ್ರೇಣಿ!!!.ಈ ಕಾಡು-ನದಿ-ಬೆಟ್ಟಗಳ ಸಂಯೋಜನೆಯು ಚಿತ್ರಕಲಾಕಾರನ ಕುಂಚದಲ್ಲಿ ಮೂಡುವ ಪ್ರಕೃತಿ ದೃಶ್ಯದ ಸಂಯೋಜನೆಯಂತಿತ್ತು. ಅದ್ಭುತವಾದ ದೃಶ್ಯ!!..
ಆಹ್ಲಾದಕರ ವಾತಾವರಣ...ಆ ತುತ್ತತುದಿಯಲ್ಲಿ ನೆಟ್ಟಿದ್ದ  ಬಿಳಿಬಣ್ಣದ ಭಾವುಟ.ಬೀಸುವ ಗಾಳಿಗೆ ಹಾರಾಡುತಿತ್ತು. ಶಿಖರದ ಮೇಲೆ ಚಿಕ್ಕ ಬಸವೇಶ್ವರನ  ಗುಡಿಯಿದ್ದು ದೊಡ್ಡದಾದ ಹಣತೆಯಿದೆ. ಮಕರ ಸಂಕ್ರಾಂತಿಯ ಮಾರನೇದಿನ ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಇಲ್ಲಿನ ಬಸವೇಶ್ವರ ದೇವರಿಗೆ ಪೂಜೆಮಾಡಿ ಹಣತೆಯಲ್ಲಿ ದೀಪ ಹಚ್ಚಲಾಗುತ್ತದೆ. ಸುಮಾರು 200 ವರ್ಷಗಳ ಹಿಂದೊಮ್ಮೆ ಅರಬೀ ಸಮುದ್ರದಲ್ಲಿ ದಿಕ್ಕು ತಪ್ಪಿದ ಬ್ರಿಟಿಷರ ಹಡಗು, ಈ ದೀಪ ನೋಡಿ ದಡ ಸೇರಲಾಗಿತ್ತು ಎನ್ನುವ ಪ್ರತೀತಿಯೂ ಇದೆ. ಆ ಪರ್ವತ ತುದಿಯಲ್ಲೂ ಊದುಬತ್ತಿಯ ಪ್ಯಾಕೇಟ್, ಪ್ಲಾಷ್ಟಿಕ್ ಕವರ್ ಇತ್ಯಾದಿ ಕಸ ಬಿದ್ದಿದ್ದು ಅದನ್ನೂ ತೆಗೆಯಲಾಯಿತು. ಇನ್ನೊಂದು ವಿಶೇಷವೆಂದರೆ ಅಲ್ಲಿರುವ ಬಾವಿ...ಆ ಶಿಖರದ ಮೇಲೊಂದು ಕಲ್ಲಿನಿಂದಲೇ ಕಡಿದ ಬಾವಿಯಿದ್ದು ಅದರಲ್ಲಿ ಸುಮಾರು 2 ಮೀಟರನಷ್ಟ ನೀರಿತ್ತು!!... ಕಲ್ಲಲ್ಲಿ ಕಡಿದ ಬಾವಿಯು ಕಾಂಕ್ರೀಟಿನ ನೀರಿನ ಟ್ಯಾಂಕಿಯಂತಿದ್ದು ಮಳೆಗಾಲದಲ್ಲಿ ಶೇಖರವಾದ ನೀರಿನ್ನೂ ಬತ್ತಿರಲಿಲ್ಲ... ಸುತ್ತಮುತ್ತಲಿನ ಪ್ರಕೃತಿಯ ಫೋಟೋ, ಕುಳಿತು ನಿಂತು ಫೋಟೋ ತೆಗಿಸಿಕೊಂಡೆವು...ಸೂರ್ಯನ ಬಿಸಿಲು ತೀಕ್ಷವಾಗಿದ್ದರೂ ಸಣ್ಣದಾಗಿ ಬೀಸುತಿದ್ದ ತಂಗಾಳಿ ಮತ್ತು ಕಣ್ಮುಂದಿನ ಮನಮೋಹಕ ದೃಶ್ಯಗಳಿಂದಾಗಿ ಬಿಸಿಲು ನಗಣ್ಯವೆನಿಸಿತ್ತು. ಯಾವತ್ತೂ ಸಿಗದ ರೋಚಕ ಅನುಭವ ಅದಾಗಿತ್ತು...ಅಲ್ಲಿರುವ ಮರಗಳ ನೆರಳಿನಲ್ಲಿ ಕುಳಿತೇ ಇದ್ದುಬಿಡುವಾ ಅನಿಸುತಿತ್ತು...ಆದರೇನು ವಾಪಾಸಾಗುವ ಅನಿವಾರ್ಯತೆ.
ಇಳಿಜಾರು ದಾರಿಯಲ್ಲಿ ಮರುಪ್ರಯಾಣ ಶುರು ಮಾಡಿದೆವು.. ಬೆಟ್ಟವೇರಿದಷ್ಟು ಕಷ್ಟವಲ್ಲದಿದ್ದರೂ ಇಳಿಯುವಾಗಲೂ ಜಾಗರೂಕತೆಯಿಂದಿರಬೇಕು...ಮುಗ್ಗರಿಸಿ ಬೀಳುವ ಅಪಾಯ...ಸಂತುಲನ ತಪ್ಪಿದರೆ ದೇವರೇಗತಿ!...ಹೋಗುವಾಗ ಕೊಂಡ್ಯೊದಿದ್ದ ಖಾಲಿಚೀಲಗಳು ಈಗ ತುಂಬಿದ್ದವು. ಒಬ್ಬೊಬ್ಬರ ಕೈಯಲ್ಲೂ ಒಂದೊಂದು ಚೀಲ...ಇಳಿದು ಬೆಟ್ಟದ ಬುಡಕ್ಕೆ ಬಂದಾಗ ಅಲ್ಲಿಯೇ ಸ್ಥಳೀಯರ  ಮನೆಯಲ್ಲಿ ಊಟ ತಯಾರಾಗಿತ್ತು. ಊಟಮಾಡಿ ಸ್ವಲ್ಪ ದಣಿವಾರಿಕೊಂಡೆವು. ಎಲ್ಲರೂ ತಂದ ಕಸದ ಚೀಲ ಒಟ್ಟುಸೇರಿಸಿದಾಗ ದೊಡ್ಡ ರಾಶಿಯೇ ಆಯಿತು. ಎಲ್ಲವನ್ನೂ ಬಸ್ಸಿನಲ್ಲಿ ಹಾಕಿಕೊಂಡು ಬಂದೆವು. ಪರ್ವತ ನಡಿಗೆ, ಪ್ರಕೃತಿ ವೀಕ್ಷಣೆಯ ಜೊತೆಗೆ ಸ್ವಚ್ಛತಾ ಅಭಿಯಾನವೂ ನಡೆಯಿತು. ಪ್ರಕೃತಿ ಮಾತೆಯ ಸಂರಕ್ಷಣೆಗೆ ನಮ್ಮಿಂದಾದ ಕೆಲಸಮಾಡಿದಕ್ಕೆ ಹೆಮ್ಮೆಯಾಯಿತು.
ನಾಗರಾಜ ಅಡಿಗ, ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರ, ಕೈಗಾ.

ಫೋಟೋ- ಶ್ರೀನಿವಾಸ ಪಂಚಮುಖಿ, ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರ, ಕೈಗಾ.