ಒಣಮರ....
ಅದೊಂದು ಚಿಕ್ಕ ಪೇಟೆಯಲ್ಲಿರುವ ಚಿಕ್ಕ ಜಿನಿಸಿ ಅಂಗಡಿ. ಅಂಗಡಿಯ ಮುಂದೊಂದು ಮಾವಿನ ಮರ. ಸಾಕಷ್ಟು ಹಳೆಯದಾದ ಆ ಮರ ಯಾವುದೊ ಕಾಲದಲ್ಲಿ ರಸ್ತೆ ಪಕ್ಕದ ಸಾಲು ಮಾಡದಂತಿತ್ತು. ಮಾವಿನ ಮರವೇನೂ ಒಳ್ಳೆಯ ಜಾತಿಯ ಮರವಲ್ಲ. ಆದರೆ ತನ್ನೆಲ್ಲಾ ಪ್ರಯತ್ನದಿಂದ ಚಿಕ್ಕದಾದರೂ ವರ್ಷಕ್ಕೊಮ್ಮೆ ಒಂದಿಷ್ಟು ಹಣ್ಣು ಕೊಡುತಿತ್ತು. ಬೇರೆ ಬೇರೆ ಹಕ್ಕಿಗಳೂ, ಮಂಗಗಳೂ, ಅಳಿಲುಗಳೂ ಹೀಗೆ ಹಲವಾರು ಪ್ರಾಣಿಗಳಿಗೆ ಆಶ್ರಯವಾಗಿರುವುದಲ್ಲದೆ ಮಾವಿನ ಮರ ಒಂದಿಷ್ಟು ಚೆನ್ನಾಗಿನ ಗಾಳಿಯನ್ನು ನೆರಳನ್ನೂ ಹತ್ತಿರ ಬಂದವರಿಗೆಲ್ಲ ಕೊಡುತಿತ್ತು.
ಅಂಗಡಿಯ ಮಾಲಿಕನಿಗೆ ಬೆಳ್ಳಿಗ್ಗೆ ಒಂದು ಕೆಲಸ ವಾಗುತಿತ್ತು. ಮರದ ಒಣಎಲೆಗಳು ಅಂಗಡಿಯ ಪರಿಸರದಲ್ಲಿ ಬೀಳುತಿದ್ದರಿಂದ ಎಲೆ ಗುಡಿಸುವ ಕೆಲಸ ದಿನಾಲೂ ಮಾಡ ಬೇಕಾಗಿತ್ತು. ಹಾಗೆ ಗುಡಿಸಿದ ಎಲೆಗಳು ಆ ಮರದ ಬುಡಕ್ಕೇ ಹಾಕಿ ಗೊಬ್ಬರಕ್ಕಾಗಲಿ ಎಂದು ಕೈ ತೊಳೆದುಕೊಳ್ಳುತಿದ್ದರು. ಎಲೆಗಳೊಂದಿಗೆ ಪ್ಲಾಸ್ಟಿಕ್, ಕಾಗದ ಸದ್ದಿಲ್ಲದೇ ಸೇರಿಕೊಂಡವು. ಕಸದ ರಾಶಿ ದೊಡ್ಡದಾದಾಗ ಆ ರಾಶಿಗೆ ಬೆಂಕಿ ಇಟ್ಟು ಯಾರೋ ಸ್ವಚ್ಛತಾ ಆಂದೋಲನ ಮಾಡಿದರು. ಒಂದೆರಡು ಸಲ ಆ ಬೆಂಕಿಯನ್ನು ಸಹಿಸಿದ ಮರ ನಿಧಾನವಾಗಿ ಸಾಯತೊಡಗಿತು. ಸತ್ತೇ ಹೋಯಿತು...
ಈಗ ಇದು ಒಣಮರ. ಕಡಿದುರುಳಿಸದಿದ್ದರೂ ಕೆಲವು ಸಮಯದ ನಂತರ ಅದಾಗಿಯೇ ನಶಿಸಿ ಹೋಗುತ್ತದೆ. ಅಂಗಡಿಯ ಮಾಲೀಕನ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ...
No comments:
Post a Comment